ಬೆಂಗಳೂರು: ನಗರದ ರಾಜರಾಜೇಶ್ವರಿ ಚರ್ಚ್‌ನಲ್ಲಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿದ್ದು, ಆ ಕಾರಣಕ್ಕಾಗಿ ಒಬ್ಬ ಹಿಂದೂ ಅದರ ಮೇಲೆ ದಾಳಿ ನಡೆಸಿರುವುದಾಗಿ ಚರ್ಚ್ ಮೇಲಿನ ದಾಳಿ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ಆಯೋಗದ ಮುಂದೆ ಎಚ್‌ಎಎಲ್ ಉದ್ಯೋಗಿ ಮಲ್ಲಿಕಾರ್ಜುನ ಎಂಬವರು ಹೇಳಿಕೆ ನೀಡಿದ್ದಾರೆ.
ಈ ಚರ್ಚ್ ಮೇಲಿನ ದಾಳಿಯ ಬಗ್ಗೆ ನನಗೆ ಖಚಿತ ಮಾಹಿತಿ ದೊರಕಿರುವುದಾಗಿಯೂ ಅವರು ತಿಳಿಸಿದ್ದಾರೆ. ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದ ಪರಿಶೀಲನೆ ವೇಳೆಯಲ್ಲಿ ಚರ್ಚ್‌ಗಳ ಪರ ವಕೀಲ ರೂಪರ್ಟ್ ರೊಸಾರಿಯೋ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮಲ್ಲಿಕಾರ್ಜುನ, ದಾಳಿಗೆ ಒಳಗಾದ ಚರ್ಚ್‌ನಲ್ಲಿ ನಿರಂತರವಾಗಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಲೇ ಇತ್ತು. ಈ ಬೆಳವಣಿಗೆಯಿಂದ ಅಸಮಾಧಾನಕ್ಕೆ ಒಳಗಾದವರು ಈ ದಾಳಿ ನಡೆಸಿದ್ದಾರೆ ಎಂದರು.
ಚರ್ಚ್ ಮೇಲೆ ದಾಳಿ ಮಾಡಿದವರು ಹಿಂದೂಗಳೇ ಎಂಬುದು ಸ್ಪಷ್ಟ. ಘಟನೆಯಲ್ಲಿ ಒಬ್ಬ ಅಥವಾ ಒಂದು ಗುಂಪು ಪಾಲ್ಗೊಂಡಿರಬಹುದು. ಆದರೆ ಯಾರ ಹೆಸರೂ ತಮಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ಅದೇ ರೀತಿ ಮರಿಯಣ್ಣನ ಪಾಳ್ಯ ಚರ್ಚ್ ಮೇಲೆ ನಡೆದ ದಾಳಿಯ ಬಗ್ಗೆ ಸಾಕ್ಷ್ಯ ನೀಡಿದ ಥಣಿಸಂದ್ರದ ದೇವರಾಜು ಎಂಬವರು, ಹಲ್ಲೆಗೆ ಒಳಗಾದ ಚರ್ಚ್‌ನ ಹೆಸರು ತಮಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಅದು ಕ್ರೈಸ್ತ ಪ್ರಾರ್ಥನಾ ಮಂದಿರ ಎಂಬುದಷ್ಟೇ ತನಗೆ ಗೊತ್ತು ಎಂದು ತಿಳಿಸಿದರು. |