ಚುನಾವಣೆ ಪ್ರಚಾರದಲ್ಲಿ ತೊಡಗುವ ಸರಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜಾರಿಯಾಗಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಎಚ್ಚರಿಸಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನೌಕರರು ಪ್ರಚಾರಕ್ಕೆ ಸಹಕರಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ದಿನಕ್ಕೆ 5 ರಿಂದ 6 ದೂರುಗಳು ಬರುತ್ತಿವೆ ಎಂದು ತಿಳಿಸಿದರು.
ನೌಕರರು ಪ್ರಚಾರಕ್ಕೆ ಹೋದ ಪ್ರಕರಣ ಪತ್ತೆಯಾದ ತಕ್ಷಣ ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೆಲಸಕ್ಕೆ ರಜೆ ಹಾಕಿದ ಸಿಬ್ಬಂದಿ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಭಾಗಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಮಾರ್ಚ್ 2 ರಿಂದ ಈವರೆಗೆ 325 ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ, ಶಿವಮೊಗ್ಗ, ಬಳ್ಳಾರಿಯಲ್ಲಿ ಈ ಲೋಪ ಹೆಚ್ಚಾಗಿದೆ ಎಂದರು.
ಚುನಾವಣೆ ಭದ್ರತೆಗೆ ಕೇಂದ್ರ ಪೊಲೀಸ್ ಪಡೆಯ 75 ತುಕಡಿ ಕಳುಹಿಸಿ ಕೊಡಲು ಮನವಿ ಮಾಡಲಾಗಿದೆ. ಕ್ಷೇತ್ರವೊಂದರಲ್ಲಿ ಕನಿಷ್ಠ 2,ಗರಿಷ್ಠ 3 ವೀಕ್ಷಕರ ನೇಮಕವಾಗಲಿದೆ. ಮಹಾರಾಷ್ಟ್ರ, ಆಂಧ್ರದ ಗಡಿಗಳಲ್ಲಿ ಈ ಬಾರಿ ಒಂದೇ ದಿನ ಮತದಾನ ನಡೆಯುತ್ತಿದೆ. ಹೀಗಾಗಿ, ಗಡಿ ಜಿಲ್ಲೆಗಳಲ್ಲಿ ನಕಲಿ ಮತದಾನ ತಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು. |