ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 62ವರ್ಷಗಳ ನಂತರವೂ ಕೂಡ ಕಾಂಗ್ರೆಸ್ ಪಕ್ಷ ಭಾರತ್ ನಿರ್ಮಾಣ್ ಯೋಜನೆಯ ಘೋಷಣೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವುದು ನಗೆಪಾಟಿಲಿನ ವಿಷಯ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಭಾರತ್ ನಿರ್ಮಾಣ್ ರಾಲಿಗೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ರಹಕಹಳೆ ಮೊಳಗಿಸಿದ್ದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕಳೆದ 50ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಯಾವತ್ತೂ ದೇಶವನ್ನು ಕಟ್ಟುವ ಕೆಲಸ ಮಾಡಲೇ ಇಲ್ಲ ಎಂದು ದೂರಿದರು.
ಕಾಂಗ್ರೆಸ್ ಆಡಳಿತದಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಳ ಕಂಡಿದೆ, ಬೆಲೆ ಏರಿಕೆ ಹಾಗೂ ಕೊಳಗೇರಿಗಳ ಅಭಿವೃದ್ದಿ ಇಲ್ಲದಂತಾಗಿರುವುದೇ ಕಾಂಗ್ರೆಸ್ ಸಾಧನೆ ಎಂದು ಬಣ್ಣಿಸಿದ ರಾಘುವೇಂದ್ರ, ಕಳೆದ ಐದು ದಶಕಗಳ ಆಡಳಿತದಲ್ಲಿ ಭಾರತವನ್ನು ಸಶಕ್ತವಾಗಿ ಕಟ್ಟಲು ಸಾಧ್ಯವಾಗಿಲ್ಲದ್ದು, ಇದೀಗ ಭಾರತ್ ನಿರ್ಮಾಣ್ ಹೆಸರಲ್ಲಿ ಮತಯಾಚನೆ ಹೊರಟಿರುವುದು ನಾಚಿಕೆಗೇಡು, ಇದು ಕಾಂಗ್ರೆಸ್‌ನ ಭಾರತ್ ನಿರ್ಮಾಣ್ ಅಲ್ಲ, ನಿರ್ನಾಮ ಎಂದು ಕಿಡಿಕಾರಿದರು. |