ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಪಕ್ಷದ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಮಂಗಳವಾರ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರಚಾರದ ಸಂದರ್ಭದಲ್ಲಿ ಸೋಮವಾರ ರಾತ್ರಿ 10.20ರ ತನಕ ಭಾಷಣ ಮಾಡಿರುವುದು ಪ್ರಾಥಮಿಕ ವರದಿಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಆಯೋಗ ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಪರಿಶೀಲನೆ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ, ಅಂತಿಮ ವರದಿ ನಿರೀಕ್ಷೆ ಮಾಡಲಾಗುತ್ತಿದೆ. ಅದು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಮತ್ತು ಗುರುಪಾದಪ್ಪ ನಾಗಮಾರಪಳ್ಳಿ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ನ್ಯಾಯಾಲಯದಲ್ಲಿ ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು.
ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರದಿಂದ ಪಡೆದಿರುವ ಸಾಲವನ್ನು ಗುತ್ತಿಗೆದಾರರ ಬಿಲ್ ಪಾವತಿಗೆ ಬಳಸಲಾಗುತ್ತಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು. |