ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಖಚಿತ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಗಬದಲಿಸಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡ್‌ಗೆ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಹೇಳಿಕೆಗೆ ಎಸ್.ಎಂ.ಕೃಷ್ಣ ಅವರೇ ಅಂತ್ಯ ಹಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಕೃಷ್ಣ, ಪ್ರಸಕ್ತ ಲೋಕಸಭೆ ಚುನಾವಣೆಗೆ ತಾವು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನನ್ನ ಬಗ್ಗೆ ಗೌರವದಿಂದ ಅನೇಕ ಹಿತೈಷಿಗಳು, ಮುಖಂಡರು, ಮಿತ್ರರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದಾರೆ. ನಾನು ಈಗಾಗಲೇ ರಾಜ್ಯಸಭಾ ಸದಸ್ಯತ್ವ ಹೊಂದಿದ್ದೇನೆ. ಹಿರಿಯರ ಮನೆಯ ಗೌರವಾನ್ವಿತ ಸದಸ್ಯನಾಗಿ ಮುಂದುವರಿಯುತ್ತೇನೆ. ಚುನಾವಣಾ ರಾಜಕೀಯದಿಂದ ದೂರ ಇರಲು ಇಷ್ಟಪಡುತ್ತೇನೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕೃಷ್ಣ ಪತ್ರದಲ್ಲಿ ವಿವರಿಸಿದ್ದಾರೆ.ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೃಷ್ಣ ಅವರು ಸ್ಪರ್ಧಿಸುವಂತೆ ಅನೇಕ ಕಾಂಗ್ರೆಸ್ ಮುಖಂಡರು ಅವರಿಗೆ ಒತ್ತಡ ಹೇರಿದ್ದರು. ತಾವು ಸ್ಪರ್ಧಿಸಲು ಸಿದ್ದ, ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಕೃಷ್ಣ ಈ ಹಿಂದೆ ಸ್ಪಷ್ಟಪಡಿಸಿದ್ದರು. |