ರೈತನ ಮಗನೊಬ್ಬ ಈ ದೇಶದ ಪ್ರಧಾನಮಂತ್ರಿಯಾಗಿದ್ದು ಈಶ್ವರನ ಲೀಲೆಯೇ ಹೊರತು ನನ್ನದೇನೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.ಮಂಗಳವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹೋರಾಟ ಮಾಡಿ ತೃತೀಯರಂಗ ಶಕ್ತಿ ಕಟ್ಟಿರುವುದು, ಈಶ್ವರನ ಪ್ರೇರಣೆಯಿಂದಲೇ ಹೊರತು, ನಾನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಕನಸಿನಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದ ಗೌಡರು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಒಂದೇ ವಾರದಲ್ಲಿ ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟವರು ಬಡ ಲಿಂಗಾಯಿತರೇ, ಮೃತನ ಕುಟುಂಬ ಸದಸ್ಯರಿಗೆ ಮಠಾಧೀಶರು ಯಾರೂ ಸಾಂತ್ವಾನ ಹೇಳಲಿಲ್ಲ. ಈ ಗೌಡನೇ ಹೋಗಬೇಕಾಯಿತು ಎಂದು ಹೇಳಿದರು.ರಾಜ್ಯದಲ್ಲಿ ಕೋಮುಶಕ್ತಿಗಳ ಅಟ್ಟಹಾಸ ಮಿತಿಮೀರುತ್ತಿದೆ, ಅದನ್ನು ತಡೆಗಟ್ಟಬೇಕಾದ ಅಗತ್ಯವಿದೆ ಎಂದ ಅವರು, ತೃತೀಯ ರಂಗದಿಂದ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು. |