ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತೃತೀಯ ರಂಗವು ಬಲಗೊಳ್ಳುತ್ತಿರುವುದು ಕಾಂಗ್ರೆಸ್‌ನ್ನು ಆತಂಕಕ್ಕೀಡು ಮಾಡಿದ್ದು, ಸೋನಿಯಾ ಗಾಂಧಿ ಈ ಹಿನ್ನೆಲೆಯಲ್ಲಿ ತೃತೀಯ ರಂಗದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ತೃತೀಯ ರಂಗದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಪ್ರಧಾನಿ ಆಕಾಂಕ್ಷಿಗಳು ಎಂದು ಸೋನಿಯಾ ಲೇವಡಿ ಮಾಡಿದ್ದಾರೆ. ಆದರೆ ದೇಶಕ್ಕೆ ಒಬ್ಬರೇ ಪ್ರಧಾನಿಯಾಗುವರು ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಯುಪಿಎ ಮತ್ತು ಎನ್‌ಡಿಎಗೆ ಪರ್ಯಾಯವಾಗಿ ತೃತೀಯ ರಂಗ ಬಲಗೊಳ್ಳುತ್ತಿದೆ. ತೃತೀಯ ರಂಗವು ಅಧಿಕಾರಕ್ಕೆ ಬಂದರೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಿದೆ. ಈಗಿರುವ ಚುನಾವಣಾ ನೀತಿ ಸಂಹಿತೆಯಿಂದ ರಾಜಕೀಯ ಪಕ್ಷಗಳು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಎದುರಿಸುವುದು ಕಷ್ಟವಾಗುತ್ತಿದೆ. ಚುನಾವಣಾ ನೀತಿಯಲ್ಲಿ ಮಾರ್ಪಾಡು ಆಗಬೇಕಾಗಿದೆ. ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಬಂದಿದೆ ಎಂದು ತಿಳಿಯುವುದರಿಂದ ಸಂಘರ್ಷಕ್ಕೆ ಎಡೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಪರೇಷನ್ ಕಮಲದ ಮೂಲಕ ಹೆಸರಿನಲ್ಲಿ ಬಿಜೆಪಿ ಬೇರೆ ಪಕ್ಷಗಳ ಅಭ್ಯರ್ಥಿಗಳನ್ನು ತನ್ನ ತೆಕ್ಕೆಗೆ ಸೆಳೆಯುತ್ತಿದೆ. ಇದು ಬಿಜೆಪಿಯ ಕೊಳಕು ರಾಜಕೀಯ ಮಾಡುತ್ತಿದೆ ಎಂದು ದೂರಿದರು.
|