ಗಣನೀಯ ಪ್ರಮಾಣದಲ್ಲಿ ರಾಜಸ್ವ ಸಂಗ್ರಹಣೆಯಾಗಿದ್ದರೂ ಅಭಿವೃದ್ದಿ ಕೆಲಸಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆ ಮಾಡದ ಬಿಜೆಪಿ ಸರ್ಕಾರ ರಾಜ್ಯವನ್ನು ಅರಾಜಕತೆಯತ್ತ ದೂಡುತ್ತಿದೆ ಎಂದು ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕ ವಿ,.ಎಸ್.ಉಗ್ರಪ್ಪ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ, ವಸತಿ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಸೇರಿದಂತೆ ವಿವಿಧ ಇಲಾಖೆಗಲ್ಲಿ ಅಭಿವೃದ್ದಿ ಕೆಲಸಗಳಿಗೆ 24 ಸಾವಿರ ಕೋಟಿ ರೂ. ವೆಚ್ಚ ಮಾಡುವ ಯೋಜನಾ ಗಾತ್ರ ನಿಗದಿಪಡಿಸಿಕೊಂಡು ಫೆಬ್ರುವರಿ ಅಂತ್ಯದವರೆಗೆ ಕೇವಲ 12,862 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ದಿ ಮಂತ್ರ ಜಪಿಸುತ್ತಿದ್ದರೂ, ವಾಸ್ತವವಾಗಿ ಅಭಿವೃದ್ದಿ ಕೆಲಸಗಳಿಗೆ ಹಣ ಬಿಡುಗಡೆ ಮಾಡದೆ ರಾಜ್ಯವನ್ನು ಅಭಿವೃದ್ದಿಯಲ್ಲಿ ಕುಂಠಿತಗೊಳಿಸಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಕಳೆದ 11 ತಿಂಗಳಲ್ಲಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ದೂರಿದರು.
ಅಭಿವೃದ್ದಿ ಕುಂಠಿತಕ್ಕೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಪಕ್ಷ ನೇರ ಹೊಣೆ ಹೊರಬೇಕು.. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಮಾಡಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು. |