ರಾಜ್ಯದಲ್ಲಿ ನಡೆಯುವ ಹಿಂದೂ ಸಮಾಜೋತ್ಸವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ರಾಜಧಾನಿಗೆ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮಾತುಕತೆ ನಡೆಸಿ, ಬಿಜೆಪಿ ನಡೆಸುತ್ತಿರುವ ಹಿಂದೂ ಸಮಾಜೋತ್ಸವಕ್ಕೆ ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮನವಿಗೆ ಕಿಡಿಕಾರಿರುವ ರವಿ, ಹಿಂದೂ ಸಮಾಜೋತ್ಸವ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ದಾರಿಯಲ್ಲಿ ಆನೆ ನಡೆದು ಹೋಗುತ್ತಿರುವಾಗ ನಾಯಿ ಬೊಗಳುವುದು ಸಾಮಾನ್ಯ ಅದಕ್ಕೆ ಏನು ಮಾಡಲಾಗುವುದಿಲ್ಲ ಎಂದು ಲೇವಡಿ ಮಾಡಿದರು.
ಹಿಂದೂ ಸಮಾಜೋತ್ಸವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೂ ಸಂಪ್ರದಾಯವನ್ನು ಎತ್ತಿ ಹಿಡಿಯುವುದು ಹಾಗೂ ಜನಸಾಮಾನ್ಯರಲ್ಲಿ ಜನಜಾಗೃತಿ ಉಂಟು ಮಾಡುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಹಿಂದೂ ಸಮಾಜೋತ್ಸವದಿಂದ ಕೋಮುದಳ್ಳುರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ದೂರು ಕೊಡುವವರು ಕೊಡುತ್ತಾರೆ, ಅದಕ್ಕೆ ನಾವೇನೂ ಮಾಡುವಂತಿಲ್ಲ ಎಂದರು. |