ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಬಡವರಿಗೆ ಹಣ ಕೊಡಲ್ಲ, ಮಠ-ಮಾನ್ಯಗಳಿಗೆ ಕೊಡುತ್ತೇನೆ ಎನ್ನುತ್ತಾರೆ. ಅವರ ಉದ್ದಟತನಕ್ಕೆ ತಕ್ಕ ಪಾಠ ಕಲಿಸಬೇಕಾದವರು ಈ ರಾಜ್ಯದ ಮತದಾರರು ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ.ಕೋಲಾರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಭಾರತ್ ನಿರ್ಮಾಣ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಹಿಂದುಳಿದವರ ಪರ ಅಲ್ಲ, ದಲಿತರ ಪರ ಅಲ್ಲ, ಅಭಿವೃದ್ದಿಯನ್ನು ಕಡೆಗಣಿಸಿರುವ ಮುಖ್ಯಮಂತ್ರಿಗಳು ಬಡವರಿಗೆ ಲ್ಯಾಪ್ ಟಾಪ್ ಕೊಡುವ ಭರವಸೆ ನೀಡಿದ್ದಾರೆ. "ಬಡವರು ಲ್ಯಾಪ್‌ಟಾಪ್ ತೆಗೆದುಕೊಂಡು ಏನ್ ಉಪ್ಪಿನಕಾಯಿ ಹಾಕಿ ನೆಕ್ಕೋದಾ?" ಅಂತಾ ಲೇವಡಿ ಮಾಡಿದರು.ತಮ್ಮ ಮಾತಿನುದ್ದಕ್ಕೂ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲಿಯೇ ಯಡಿಯೂರಪ್ಪನವರಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನೇ ಕಂಡಿಲ್ಲ ಎಂದರು.ಸಂಸ್ಕೃತಿಯ ವಕ್ತಾರರೆಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷದವರು ಎಷ್ಟು ಡೋಂಗಿ ಎನ್ನುವುದು ಅವರು ಆಡಳಿತಕ್ಕೆ ಬಂದ ಮೇಲೆ ನಡೆದ ಘಟನೆಗಳೇ ಸಾಕ್ಷಿ ಎಂದು ಹೇಳಿದರು. ಬಿಜೆಪಿಯ ಅಂಗಪಕ್ಷವಾಗಿರುವ ಶ್ರೀರಾಮಸೇನೆಯೇ ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿ ಯುವತಿಯರ ಮೇಲೆ ಹಲ್ಲೆ ನಡೆಸಿದರು ಇದು ಯಾವ ಸಂಸ್ಕೃತಿ ಎಂದು ಭಾಜಪವನ್ನು ತರಾಟೆಗೆ ತೆಗೆದುಕೊಂಡರು.ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಚರ್ಚ್‌ಗಳನ್ನು ಧ್ವಂಸ ಮಾಡಿದರು, ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಇರುವಂತಹ ವ್ಯವಸ್ಥಿತ ಪಿತೂರಿ ನಡೆಸುತ್ತಿರುವ ಬಿಜೆಪಿ ಡೋಂಗಿ ಸರ್ಕಾರ ಎಂದು ಜರೆದರು. |