ನೀತಿ ಸಂಹಿತೆ ನಿಯಮಗಳು ಕಠಿಣವಾಗಿದ್ದು, ಪಕ್ಷದ ಸಚಿವರು, ಶಾಸಕರು, ಅಭ್ಯರ್ಥಿಗಳು ಹಾಗೂ ಮುಖಂಡರು ಬಹಳ ಎಚ್ಚರಿಕೆಯಿಂದ ಪಾಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
ಕ್ಷೇತ್ರವಾರು ಅಭ್ಯರ್ಥಿಗಳು ಹಾಗೂ ಚುನಾವಣಾ ಉಸ್ತುವಾರಿಗಳ ಜೊತೆ ಸಭೆ ನಡೆಸಿದ ಅವರು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆ ಪ್ರಚಾರ ನಡೆಸಬೇಕು. ಇಲ್ಲದಿದ್ದರೆ, ಅದರ ಭೂತ ನಮಗೆ ಸುತ್ತಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯ ಪಕ್ಷಕ್ಕಿದೆ. ಹಿಂದಿನ ಚುನಾವಣೆಯಲ್ಲಿ ಪಕ್ಷ 18 ಸ್ಥಾನಗಳನ್ನು ಗೆದ್ದಿದೆ. ಈಗ ರಾಜ್ಯದಲ್ಲಿ ಪಕ್ಷ ಬಲಯುತವಾಗಿದೆ. ಅಷ್ಟೇ ಅಲ್ಲ, ನಮ್ಮದೇ ಸರಕಾರವಿದೆ. ಎಲ್ಲ ಸಂಪನ್ಮೂಲಗಳನ್ನು ಕ್ರೋಡಿಕರಿಸಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕು. ಇತರ ಪಕ್ಷಗಳಿಂದ ಮುಖಂಡರು, ಮಾಜಿ ಹಾಗೂ ಹಾಲಿ ಶಾಸಕರು ಪಕ್ಷಕ್ಕೆ ಬಂದರೆ ಮುಕ್ತವಾಗಿ ಸ್ವಾಗತಿಸಬೇಕು. ಪಕ್ಷದ ಬಲವರ್ಧನೆಗೆ ಗಮನಕೊಡಬೇಕು ಎಂದು ಯಡಿಯೂರಪ್ಪ ಹೇಳಿದರು.
ಪ್ರತಿ ಪಕ್ಷಗಳ ಶಕ್ತಿ ಅರಿತು ಕೆಲಸ ಮಾಡಿ, ಅವುಗಳಿಗೆ ಪರ್ಯಾಯ ತಂತ್ರಗಾರಿಕೆ ರೂಪಿಸಿ, ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಸರ್ಕಾರದ ಸಾಧನೆ ಹಾಗೂ ಪಕ್ಷದ ಪ್ರಣಾಳಿಕೆಯನ್ನು ತಲುಪಿಸುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. |