ಬಡ್ಡಿ ವ್ಯವಹಾರ ನಡೆಸುತ್ತಿದ್ದ ನರಸಿಂಹ ಮೂರ್ತಿ ಎಂಬವರನ್ನು ಹಾಡಹಗಲೇ ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯ ಆಜಾದ್‌ನಗರದಲ್ಲಿ ಗುರುವಾರ ನಡೆದಿದೆ.
ಆಜಾದ್ ನಗರದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ನರಸಿಂಹ ಮೂರ್ತಿ ಅವರು ಇಂದು ಬೆಳಿಗ್ಗೆ ಸ್ಕಾರ್ಪಿಯೋದಲ್ಲಿ ಆಗಮಿಸುತ್ತಿದ್ದ ವೇಳೆ, ಸ್ಕಾರ್ಪಿಯೋವನ್ನು ದಾರಿ ಮಧ್ಯೆಯೇ ತಡೆದು ನಿಲ್ಲಿಸಿ, ಅವರನ್ನು ಹೊರಗೆಳೆದು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಹ ಮೂರ್ತಿ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿ ಓಡಿಹೋಗುವ ಮೂಲಕ ಅಪಾಯದಿಂದ ಪಾರಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಾಜಿ ಶಾಸಕ ದೇವರಾಜ್ ಬಲಗೈ ಬಂಟನಾಗಿದ್ದ ನರಸಿಂಹ ಮೂರ್ತಿ ಲೇವಾದೇವಿ ವ್ಯವಹಾರದ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ದೂರು ದಾಖಲಾಗಿತ್ತು. ಬಡ್ಡಿ ವ್ಯವಹಾರವೇ ಕೊಲೆ ಕಾರಣ ಇರಬಹುದೆಂದು ಅಧಿಕಾರಿಗಳು ಶಂಕಿಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |