ರಾಜ್ಯದಲ್ಲಿ ಕಾಂಗ್ರೆಸ್ ಹಳೆ ಅತ್ತೆ ಇದ್ದಂತೆ, ಬಿಜೆಪಿ ಹೊಸ ಸೊಸೆ ಇದ್ದಂತೆ ಎಂಬ ಹಾಸ್ಯಮಯ ಹೇಳಿಕೆ ನೀಡುವ ಮೂಲಕ ನಟ ಜಗ್ಗೇಶ್ ಇಂದಿನ ರಾಜಕೀಯ ಸನ್ನಿವೇಶವನ್ನು ಬಣ್ಣಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಸಮರ್ಪಕ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಹಾಗಾಗಿ ಮನನೊಂದ ಕಾಂಗ್ರೆಸ್ ಮುಖಂಡರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದರು.
ಕಾಂಗ್ರೆಸ್ ಹಳೆಯ ಅತ್ತ ಇದ್ದ ಹಾಗೆ. ಮನೆಯ ಜವಾಬ್ದಾರಿಯನ್ನು ಹೊತ್ತು ಎಲ್ಲ ಕೀಲಿಕೈಗಳನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಇಡೀ ಮನೆಯನ್ನು ನಿಯಂತ್ರಿಸುವ ಮೂಲಕ ಯಾರ ಬೇಕು ಬೇಡಗಳನ್ನು ಪರಿಹರಿಸುವವುದಿಲ್ಲ. ಇದರಿಂದ ಸಂಸಾರದಲ್ಲಿ ಒಡಕುಂಟಾಗುವ ಸಾಧ್ಯತೆಗಳಿವೆ. ಆದರೆ, ಬಿಜೆಪಿ ಹಾಗಲ್ಲ. ಅತ್ತೆಯ ಎಲ್ಲ ವ್ಯವಹಾರಗಳನ್ನು ಬಲ್ಲ ಸಮರ್ಪಕ ಹೊಸ ಸೊಸೆ ಇದ್ದಂತೆ. ಸಂಸಾರವನ್ನು ಸರಿಯಾದ ಕಡೆ ನಡೆಸಿಕೊಂಡು ಹೋಗುವ ಹಾಗೂ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಅಭಿವೃದ್ದಿಯತ್ತ ಕೊಂಡೊಯ್ಯುವ ಹೊಸ ಸೊಸೆ ಬಿಜೆಪಿಯಾಗಿದೆ.
ತಾವು ಕಾಂಗ್ರೆಸ್ ತೊರೆಯುವಾಗ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈಗ ಅನೇಕ ನಾಯಕರು ನನ್ನ ಹಾದಿ ತುಳಿಯುತ್ತಿದ್ದಾರೆ ಎಂದರು. |