ಪ್ರಕರಣವೊಂದರ ವಿಚಾರಣೆಗೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ವಿರುದ್ಧ ಮುಧೋಳದ ಕಿರಿಯ ಶ್ರೇಣಿಯ ನ್ಯಾಯಾಲಯ ಗುರುವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.ಅಕ್ರಮ ಗಣಿಗಾರಿಕೆ, ಕೋಮುವಾದದ ವಿರುದ್ದ ಸದಾ ಧ್ವನಿ ಎತ್ತುತ್ತಿರುವ ಹಿರಿಯ ಸಾಹಿತಿ ಅನಂತಮೂರ್ತಿ ಅವರು ಹೇಳಿಕೆಗಳ ಮೂಲಕ ಸದಾ ಪ್ರಚಾರದಲ್ಲಿರುತ್ತಿದ್ದ ಅವರೇ ಸ್ವತಃ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಮುಧೋಳದಲ್ಲಿ 2004ರಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಬಜರಂಗದಳದ ಕಾರ್ಯಕರ್ತರು ನಡೆಸಿದ ಗಲಾಟೆಗೆ ಸಾಕ್ಷಿಯಾಗಿದ್ದ ಪ್ರಕರಣದ ವಿಚಾರಣೆಗೆ ಅನಂತಮೂರ್ತಿ ಗೈರುಹಾಜರಾಗಿದ್ದರು. ಇಟಲಿ ದೇಶದ ಕಂಪನಿಯೊಂದು ಒಳ ಉಡುಪುಗಳ ಮೇಲೆ ಹಿಂದೂ ದೇವರ ಚಿತ್ರ ಮುದ್ರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಬಜರಂಗ ದಳದ ಕಾರ್ಯಕರ್ತನೊಬ್ಬ ಅನಂತಮೂರ್ತಿ ಭಾಗವಹಿಸಿದ್ದ ಸಮಾರಂಭಕ್ಕೆ ಅಡ್ಡಿಪಡಿಸಿದ್ದ.ಈ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನಂತಮೂರ್ತಿ ಅವರನ್ನು ಸಾಕ್ಷಿಯನ್ನಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷಿ ಹೇಳಬೇಕಾದ ಅನಂತಮೂರ್ತಿ ಗೈರು ಹಾಜರಾಗಿದ್ದರಿಂದ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಮೇ 4ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ. |