ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಅಭಿಯಾನಕ್ಕೆ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಯ 'ಭಾರತ್ ನಿರ್ಮಾಣ್' ಹೆಸರನ್ನು ಬಳಸಿಕೊಂಡಿರುವುದರ ವಿರುದ್ದ ಬಿಜೆಪಿ ಕಿಡಿಕಾರಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಮುಖಂಡ ವೆಂಕಯ್ಯ ನಾಯ್ಡು, ಭಾರತ್ ನಿರ್ಮಾಣ್ ಎಂದು ಹೆಸರಿಸಿರುವುದು ಚುನಾವಣಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಹೆಸರುಗಳನ್ನು ಪಕ್ಷಗಳು ಬಳಸಿಕೊಳ್ಳುವಂತಿಲ್ಲ. ಆದರೆ 2005ರಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಭಾರತ್ ನಿರ್ಮಾಣ್ ಯೋಜನೆಗೆ ಸ್ವತಃ ಪ್ರಧಾನ ಮಂತ್ರಿಗಳೇ ಚಾಲನೆ ನೀಡಿದ್ದಾರೆ. ಹೀಗಿರುವಾಗ ಈಗ ಆ ಹೆಸರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿರುವುದನ್ನು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗ ಗಮನ ಹರಿಸುವಂತೆ ತಿಳಿಸಿದ ಅವರು, ಈ ಬಗ್ಗೆ ಬಿಜೆಪಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. |