ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಮತದಾರರ ಒಲೈಕೆಗೆ ಹರಸಾಹಸ ಮಾಡುತ್ತಿದ್ದರೆ, ಇತ್ತ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ, ಅನೇಕರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿರುವುದಾಗಿ ಅಳಲು ವ್ಯಕ್ತಪಡಿಸುತ್ತಿದ್ದಾರೆ.
ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಬೆಂಗಳೂರು ಒಂದರಲ್ಲೇ 21 ಮತದಾರ ಸೇವಾ ಕೇಂದ್ರದ ವ್ಯಾಪ್ತಿಯಲ್ಲೂ ಈ ಲೋಪ ಕಂಡು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮತದಾರರೊಬ್ಬರು, ಕಳೆದ 15 ವರ್ಷಗಳಿಂದಲೂ ನಡೆಯುತ್ತಿರುವ ಎಲ್ಲಾ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ. ಈಗ ನೋಡಿದರೆ ಪಟ್ಟಿಯಲ್ಲಿ ಹೆಸರೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಅನೇಕ ಮತದಾರರನ್ನು ವಿನಾಕಾರಣ ಪಟ್ಟಿಯಿಂದ ಕೈ ಬಿಡಲಾಗಿದೆ. ಇದನ್ನು ಮತದಾರ ಸೇವಾ ಕೇಂದ್ರಕ್ಕೆ ತೆರಳಿ ಪ್ರಶ್ನಿಸಿದರೆ ಮತ್ತೆ ಅರ್ಜಿ ಹಾಕಿ ಎಂಬ ಉತ್ತರ ಕೇಳಿಬರುತ್ತಿದೆ.ಕೆಲ ಕಡೆಗಳಲ್ಲಿ ಅಪ್ಪ ಅಮ್ಮನ ಹೆಸರನ್ನು ತೆಗೆದುಹಾಕಿದ್ದರೆ, ಮಕ್ಕಳ ಹೆಸರು ಹಾಗೆ ಇದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮತದಾರರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. |