ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಅನಂತಕುಮಾರ್ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಲ್ಲೇಶ್ವರಂನಲ್ಲಿರುವ ಗಣಪತಿ ದೇವಾಲಯ ಹಾಗೂ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ತೆರಳಿ ಜಯನಗರದಲ್ಲಿರುವ ಮಹಾನಗರಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಅಲ್ಲದೇ ಇಂದು ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಿವೃತ್ತ ನ್ಯಾಯಮೂರ್ತಿ ಹನುಮಂತಪ್ಪನವರು ಈ ಬಾರಿ ಬಳ್ಳಾರಿಯಿಂದ ಸ್ಪರ್ಧಿಸುತ್ತಿದ್ದಾರೆ.
ಬಳ್ಳಾರಿ ನಗರದಲ್ಲಿರುವ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. |