ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಿ ತಮಿಳರಿಗೆ ಇಲ್ಲಿ ಭದ್ರ ಬುನಾದಿ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಸ್ತ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಒತ್ತಾಯಿಸಿದ್ದಾರೆ.
ಚುನಾವಣೆಯ ದೊಂಬರಾಟದಲ್ಲಿ ನಿರತರಾಗಿರುವ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರು ಮತ ಬ್ಯಾಂಕಿನ ಆಸೆಗಾಗಿ ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಿರುವುದು ಸರಿಯಲ್ಲ ಎಂದು ನಾರಾಯಣಗೌಡ ಅವರು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು, ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ ಸೇರಿದಂತೆ ಅನೇಕ ಮಹನೀಯರು ಜನ್ಮ ತಳೆದ ಮಣ್ಣಿನಲ್ಲಿ ಯಡಿಯೂರಪ್ಪ ಅವರು ಹೊಟ್ಟೆಪಾಡಿಗಾಗಿ ರಾಜ್ಯಕ್ಕೆ ಬಂದ ತಮಿಳರಿಗೆ ಇಲ್ಲಿಯೇ ನೆಲೆ ಕಲ್ಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರು ಒಂದು ಕಡೆ ಕನ್ನಡದ ವರ್ಷವೆಂದು ಘೋಷಣೆ ಮಾಡಿ ಮತ್ತೊಂದೆಡೆ ಮರಾಠಿಗರನ್ನು ಹಾಗೂ ತಮಿಳರನ್ನು ಓಟಿಗಾಗಿ ಓಲೈಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ನಾಡಿನ ಜನತೆಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ವೇದಿಕೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. |