ಪೂರ್ವಾಗ್ರಹ ಪೀಡಿತ ಧೋರಣೆ ಹೊಂದಿರುವ ಮಂಗಳೂರು ಜಿಲ್ಲಾಧಿಕಾರಿಯ ವರ್ಗಾವಣೆ ಹಾಗೂ ಹದ್ದು ಮೀರಿ ವರ್ತಿಸುತ್ತಿರುವ ಸುಳ್ಯ ತಾಲೂಕು ತಹಸೀಲ್ದಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಬೇಕಾದರೆ ಆಯೋಗ ಶೀಘ್ರವೇ ಜಾರಿಗೆ ಬರುವಂತೆ ಮಂಗಳೂರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರಿಗೆ ದೂರು ನೀಡಿದ ಬಿಜೆಪಿ ವಕ್ತಾರ ವಿ.ಧನಂಜಯ್ ಕುಮಾರ್ ಹಾಗೂ ಶಾಸಕ ಡಾ.ಅಶ್ವಸ್ಥನಾರಾಯಣ ಒಂದು ವೇಳೆ ಆಯೋಗ ಈ ಇಬ್ಬರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ್ ಕುಮಾರ್, ಸುಳ್ಯದಲ್ಲಿ ಇಂದು ಪಕ್ಷದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಬರುವ 500 ಕಾರ್ಯಕರ್ತರಿಗೆ ಸಸ್ಯಹಾರಿ ಊಟ ನೀಡುವುದಾಗಿ ಮೊದಲೇ ತಿಳಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಸುಳ್ಯದ ತಹಸೀಲ್ದಾರ್ ಕೂಡ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆ ಎಂದರು. |