ಒಡೆದ ಮನೆಯಂತಾಗಿರುವ ಕಾಂಗ್ರೆಸ್ ಚೇತರಿಸಿಕೊಳ್ಳುವಷ್ಟರಲ್ಲಿ ಲೋಕಸಭಾ ಚುನಾವಣೆಯೇ ಮುಗಿದು ಹೋಗಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಮತ್ತೆ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ನಾಯಕರೇ ಇಲ್ಲ. ಬೇರೆ ಪಕ್ಷದಿಂದ ಬಂದವರು ಆ ಪಕ್ಷಕ್ಕೆ ಅಧ್ಯಕ್ಷರಾಗಿರುತ್ತಾರೆ. ಇದೇ ರೀತಿ ಪ್ರತಿ ಪಕ್ಷದ ನಾಯಕ ಸ್ಥಾನಕ್ಕೆ ಕೂಡ ಬೇರೆ ಪಕ್ಷದಿಂದ ಬಂದವರನ್ನೇ ನೇಮಕ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣಗೊಂಡಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಪರಿಶಿಷ್ಟಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿ ಆಗಿಲ್ಲ ಎಂದು ಕಾಂಗ್ರೆಸ್ ಜೆಡಿಎಸ್ ಬೊಬ್ಬೆ ಹೊಡೆಯುತ್ತಿದೆ. ಇಂತಹ ಪರಿಸ್ಥಿತಿಗೆ ರಾಜ್ಯವನ್ನು ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಕಾರಣ ಹೊರತು ಬಿಜೆಪಿಯಲ್ಲ ಎಂದರು.
ರಾಜ್ಯದ ಬಗ್ಗೆ ಕೇಂದ್ರದ ಯುಪಿಎ ಸರ್ಕಾರ ಅನುಸರಿಸುತ್ತಿರುವ ತಾರತಮ್ಯದ ಕುರಿತು ಚಾರ್ಜ್ ಶೀಟ್‌ನ್ನು ಪ್ರಕಟಿಸಿ ಹಂಚುವುದಾಗಿ ಹೇಳಿದರು. ರಾಜ್ಯದ ಅಭಿವೃದ್ದಿ ಕೆಲಸಗಳ ಬಗ್ಗೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಹೋಗೋಣ ಎಂದು ಕರೆದರೆ ಪ್ರತಿ ಪಕ್ಷಗಳು ನಮ್ಮನ್ನು ವೈರಿಗಳಂತೆ ನೋಡುತ್ತಿವೆ ಎಂದು ಕಿಡಿಕಾರಿದರು. |