ಸತತ ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾದ, ಪ್ರಸಕ್ತ ವಿಧಾನಸಭೆ ಪ್ರತಿಪಕ್ಷ ಮುಖಂಡ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲ್ಬುರ್ಗಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದು, ಬುಧವಾರ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿದ ಖರ್ಗೆಯವರು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಸ್ಪರ್ಧಿ ಬಿಜೆಪಿ ಲೋಕಸಭಾ ಅಭ್ಯರ್ಥಿ ರೇವೂನಾಯಕ ಬೆಳಮಗಿ ವಿರುದ್ಧ ಗೆಲುವು ಖಚಿತ ಎಂದು ಹೇಳಿದರು.
ಹೈಕಮಾಂಡ್ ಆದೇಶದ ಮೇರೆಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಖರ್ಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಮೇಲೆ ನಂಬಿಕೆ ಇಟ್ಟು ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಕಣಕ್ಕೆ ಇಳಿದಿರುವೆ. ಜನ ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಒಂಬತ್ತು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ಜನತೆ ಈ ಬಾರಿಯೂ ನನ್ನನ್ನು ಸಂಸದನನ್ನಾಗಿ ಆರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಖರ್ಗೆ ಲೋಕಸಭೆಗೆ ಸ್ಪರ್ಧಿಸುವುದರೊಂದಿಗೆ ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ಸ್ಥಾನ ಸಿಗುವುದು ಖಚಿತವಾಗಿದೆ. |