ಜೆಡಿಎಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ತಮ್ಮ ಭಾವಚಿತ್ರವಿಲ್ಲದಿದ್ದರೆ ಗೈರು ಹಾಜರಾಗುವ ಬೆದರಿಕೆ ಹಾಕುತ್ತಿದ್ದರು. ಐದು ಪೈಸೆ ಖರ್ಚಿಲ್ಲದೆ, ನಾಲ್ಕು ಜನರನ್ನು ಪಕ್ಷಕ್ಕೆ ಕರೆತರದೆ ನಾಯಕರೆನಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಅದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ರಾಜ್ಯದಲ್ಲಿ ಬ್ಲಾಕ್ ಮೇಲ್ ರಾಜಕಾರಣ ಆರಂಭವಾಗಿದ್ದೇ ದೇವೇಗೌಡರಿಂದ ಎಂದು ಆರೋಪಿಸಿದ್ದರು.
ದೇವೇಗೌಡ ಹಾಗೂ ಮಕ್ಕಳು ಬ್ಲಾಕ್‌ಮೇಲ್ ಮಾಡುತ್ತಾರೆ ಎಂಬ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಈ ಹಿಂದೆ ಬ್ಲಾಕ್‌ಮೇಲ್ ರಾಜಕಾರಣದಲ್ಲೇ ತಮ್ಮ ಸಾರ್ವಜನಿಕ ಬದುಕನ್ನು ಕಳೆದಿರುವ ಸಿದ್ದರಾಮಯ್ಯಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ರಾಜ್ಯದಲ್ಲಿ ಕಳೆದ ಹತ್ತು ತಿಂಗಳ ಅಧಿಕಾರವಧಿಯಲ್ಲಿ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕಿಸುವ ಮೂಲಕ ಮತ ಕೇಳಲು ಹೊರಟಿರುವುದು ನಾಚಿಕೆಗೇಡು ಎಂದು ಈ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.
ಪ್ರತಿಪಕ್ಷಗಳನ್ನು ಟೀಕಿಸುವ ಮೂಲಕವೇ ಚುನಾವಣೆ ಗೆಲ್ಲುತ್ತೇವೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಂಬಿಕೆ ಕೇವಲ ಭ್ರಮೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ಹುಳುಕುಗಳನ್ನು ಹುಡುಕುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಮ್ಮ ಅಧಿಕಾರವಧಿಯಲ್ಲಿ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲವಾದ ಕಾರಣ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷಗಳನ್ನು ಟೀಕೆ ಮಾಡುವುದರ ಹೊರತಾಗಿ ಅನ್ಯ ಮಾರ್ಗವಿಲ್ಲ ಎಂದರು. |