ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಿಸಲು ಆಗಮಿಸಿದ್ದ ದಾವೂದ್ ಬಂಟ ರಶೀದ್ ಮಲಬಾರಿ ಇತ್ತೀಚೆಗಷ್ಟೇ ಉಳ್ಳಾಲ ಪೊಲೀಸರಿಗೆ ಸೆರೆಸಿಕ್ಕಿದ್ದು, ಆತನನ್ನು ಬಿಡುಗಡೆ ಮಾಡದಿದ್ದಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲಾಗುವುದು ಎಂಬ ಬೆದರಿಕೆ ದೂರವಾಣಿ ಕರೆಯೊಂದು ಮಂಗಳೂರಿನ ಪತ್ರಿಕಾ ಕಚೇರಿಯೊಂದಕ್ಕೆ ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸುವುದಾಗಿ ತಾನು ಛೋಟಾ ಶಕೀಲ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಪತ್ರಿಕಾ ಕಚೇರಿಯ ಮುಖ್ಯಸ್ಥರು ಈ ವಿಷಯವನ್ನು ಪಶ್ಚಿಮ ವಲಯದ ಡಿಜಿಪಿ ಗೋಪಾಲ್ ಹೊಸೂರ್ ಅವರ ಗಮನಕ್ಕೆ ತಂದಿದ್ದಾರೆ.
ಛೋಟಾ ಶಕೀಲ್ ಹೆಸರಿನಲ್ಲಿ ಫೋನ್ ಕರೆ ಬಂದಿರುವುದು ಹೌದು. ಆದರೆ, ಅದು ಆತನೇ ಅಥವಾ ಆತನ ಹೆಸರಿನಲ್ಲಿ ಬೇರೆ ವ್ಯಕ್ತಿ ಕರೆ ಮಾಡಿದ್ದಾನೆ ಎಂಬುದು ಖಚಿತವಾಗಬೇಕಿದೆ ಎಂದು ಹೊಸೂರು ತಿಳಿಸಿದ್ದಾರೆ.
ಮಾರ್ಚ್ 30ರಂದು ಮಂಗಳೂರು ಸಮೀಪದ ಉಳ್ಳಾಲದಲ್ಲಿ ಐದು ಮಂದಿ ದಾವೂದ್ ಸಹಚರರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಇಂಟರ್‌ಪೋಲ್‌ಗೆ ಬೇಕಾಗಿದ್ದ ಮುಂಬೈ ಮೂಲದ ಕ್ರಿಮಿನಲ್ ರಶೀದ್ ಮಲಬಾರಿ ಕೂಡ ಸೇರಿದ್ದು, ವರುಣ್ ಗಾಂಧಿ ಪಿಲಿಭಿಟ್‌ನಲ್ಲಿ ಬಂಧನಕ್ಕೀಡಾಗಲು ಆಗಮಿಸುವ ವೇಳೆಗೆ ಅವರ ಮೇಲೆ ಗುಂಡೆಸೆಯಲು ಈ ಪಾತಕಿಗಳು ಯೋಜಿಸಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಅದೇ ರೀತಿ ಮಂಗಳೂರಿಗೆ ಆಗಮಿಸಿದ್ದ ಈ ಹಂತಕ ಪಡೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಮುಗಿಸಲು ಸಂಚು ಹೂಡಲಾಗಿತ್ತು ಎಂಬ ಅಂಶವನ್ನು ಹೊರಗೆಡಹಿದ್ದರು.
ಮತ್ತಿಬ್ಬರ ಬಂಧನ: ರಶೀದ್ ಮಲಬಾರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |