ಮುಖ್ಯಮಂತ್ರಿ ಹಾಗೂ ತಮ್ಮ ನಡುವೆ ಇದ್ದ ಗೊಂದಲ ಸಿದ್ದಗಂಗಾಶ್ರೀಗಳ ಸಮ್ಮುಖ ನಿವಾರಣೆಯಾಗಿದ್ದು, ಪಕ್ಷ ತಮಗೆ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಬಿಜೆಪಿಯ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸೋಮಣ್ಣ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಫಲಪ್ರದವಾಗಿದೆ. ಮುಖ್ಯಮಂತ್ರಿ ಷರತ್ತುಗಳನ್ನು ಈಡೇರಿಸುವ ಭರವಸೆ ನೀಡಿರುವ ಕಾರಣ ಹೋರಾಟ ಕೈ ಬಿಟ್ಟಿರುವುದಾಗಿ ತಿಳಿಸಿದರು.
ಬಿಜೆಪಿ ತೊರೆಯುತ್ತೇನೆ, ಜೆಡಿಎಸ್ ಸೇರುತ್ತೇನೆ ಎಂಬುದೆಲ್ಲ ಕಟ್ಟುಕಥೆ. ಯಾವ ಪಕ್ಷದ ಮುಖಂಡರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದರು. ಹತ್ತಾರು ವರ್ಷ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳಬೇಕು. ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು. ಜಿಲ್ಲಾ ಸಮಿತಿಯಲ್ಲಿ ಹಳೆಯ ಮುಖಂಡರು, ಕಾರ್ಯಕರ್ತರಿಗೂ ಸಮಾನ ಜವಾಬ್ದಾರಿ ನೀಡಬೇಕು ಎಂಬ ಷರತ್ತು ವಿಧಿಸಿರುವುದಾಗಿ ಹೇಳಿದರು.
ಹನುಮೇಗೌಡರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಜಾತಿವಾರು ಲೆಕ್ಕಾಚಾರದಲ್ಲಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಗ್ಗೆ ಅತೃಪ್ತಿ ಇದೆ ಎಂದರು. ಜನರ ಸಮಸ್ಯೆಗೆ ಸ್ಪಂದಿಸಲಾಗದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾವ ಪುರುಷಾರ್ಥಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಪ್ರಶ್ನಿಸಿದರು. |