ಉಡುಪಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.
ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಆಪರೇಶನ್ ಕಮಲವನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳಾದ ಡಿ.ಬಿ.ಚಂದ್ರೇಗೌಡ, ಎಚ್.ಸಿ.ಶ್ರೀಕಂಠಯ್ಯ ಹಾಗೂ ಶಿವರಾಮೇಗೌಡ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಸೊರಕೆಯವರ ಹೆಸರು ಕೂಡ ಕೇಳಿ ಬರುತ್ತಿದೆ.
ಆದರೆ ಬಿಜೆಪಿ ಸೇರ್ಪಡೆ ವದಂತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಇದು ವದಂತಿಯಾಗಿದ್ದು ಯಾವುದೇ ಕಾರಣಕ್ಕೂ ಬಿಜೆಪಿ ಸೇರ್ಪಡೆಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಕೂಡ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ.ಒಂದು ಮೂಲದ ಪ್ರಕಾರ, ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊರಕೆಯರಿಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇದೀಗ ತಟಸ್ಥವಾಗಿ ಉಳಿದಿರುವ ಸೊರಕೆಯವರು ಬಿಜೆಪಿ ಸೇರ್ಪಡೆಗೊಳ್ಳುವ ವಿಷಯ ಶೀಘ್ರವೇ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.
ಸೊರಕೆಯವರನ್ನು ಸೆಳೆಯುವ ಪ್ರಸ್ತಾಪ ಬಿಜೆಪಿಯೊಳಗೆ ನಡೆದಿರುವುದು ಸತ್ಯ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಸೊರಕೆ ಬಿಜೆಪಿ ಸೇರುವುದಾದರೆ ಸ್ವಾಗತ ಎಂದು ಬಿಜೆಪಿ ಪ್ರಮುಖ ಮುಖಂಡರು ಹೇಳಿರುವುದು ಇದಕ್ಕೆ ಪುಷ್ಠಿ ನೀಡಿದೆ. |