ಭ್ರಷ್ಟರ ವಿರುದ್ಧ ಸಮರ ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ರಾಜ್ಯದ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಕೋಟ್ಯಂತರ ರೂ.ಆಸ್ತಿ ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರು, ಉಡುಪಿ, ಗದಗ್ ಹಾಗೂ ಗುಲ್ಬರ್ಗಾದಲ್ಲಿ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬೆಂಗಳೂರು ಬಿಬಿಎಂಪಿ ಪ್ರಾಜೆಕ್ಟ್ ಸೆಂಟರ್ ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ಆಸ್ತಿ ಪತ್ತೆ ಹಚ್ಚಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಅಬ್ದುಲ್ ಅವರ ಉಡುಪಿ ಬೆಳಪುವಿನಲ್ಲಿ ಇರುವ ಮನೆಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಗುಲ್ಬರ್ಗಾ ಪಾಲಿಕೆ ಅಧಿಕಾರಿ ಹನುಮಂತ ಲಿಂಗ್ಟಿ ಅವರ ಶರಣನಗರದಲ್ಲಿರುವ ಮನೆಗೆ ದಾಳಿ ನಡೆಸಿ 2ಕೋಟಿಗೂ ಮಿಕ್ಕಿ ಆಸ್ತಿ ಪತ್ತೆ ಹಚ್ಚಿದ್ದಾರೆ. ಅದೇ ರೀತಿ ಗದಗ್ ಎಪಿಎಂಸಿ ಸಹಾಯಕ ನಿರ್ದೇಶಕ ಪುಟ್ಟರಾಜು ಮನೆ, ಗದಗ ಕಚೇರಿ ಹಾಗೂ ತುಮಕೂರಿನಲ್ಲಿ ಹೊಂದಿರುವ ಆಸ್ತಿ ಕುರಿತು ತನಿಖೆ ನಡೆಸುತ್ತಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ವಿವರಿಸಿದ್ದು, ಆಸ್ತಿಯ ಒಟ್ಟು ಮೊತ್ತದ ಬಗ್ಗೆ ತನಿಖೆ ನಡೆಸಿ ವಿವರ ನೀಡುವುದಾಗಿ ಹೇಳಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಮಿಕಗಳು...
ಬೆಂಗಳೂರಿನ ಬಿಬಿಎಂಪಿ ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪ,
ಕುಂದಾಪುರ ಅರಣ್ಯ ವಲಯಾಧಿಕಾರಿ ಅಬ್ದುಲ್ ಅಜೀಜ್,
ಗುಲ್ಬರ್ಗಾ ಪಾಲಿಕೆ ಬಿಸಿಯೂಟ ಯೋಜನೆಯ ಅಧಿಕಾರಿ ಹನುಮಂತ ಲಿಂಗ್ಟಿ
ಹಾಗೂ ಗದಗ್ ಎಪಿಎಂಸಿ ಸಹಾಯಕ ನಿರ್ದೇಶಕ ಪುಟ್ಟರಾಜು |