ಅನ್ಯಪಕ್ಷಗಳ ಮುಖಂಡರು ಬಿಜೆಪಿ ಸೇರುತ್ತಿರುವುದನ್ನು ಆಪರೇಷನ್ ಕಮಲ ಎಂದು ಕರೆಯುವುದು ಸರಿಯಲ್ಲ. ಅದು ರಾಜಕೀಯ ಧ್ರುವೀಕರಣ, ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯ ಪ್ರಕ್ರಿಯೆ. ಹಾಗೆ ಬಂದವರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಇದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿಪರೀತ ಕಾಯಿಲೆ ಬಂದಿದೆ. ಆದ್ದರಿಂದ ಅದಕ್ಕೆ ಆಪರೇಷನ್ ಆಗಬೇಕು. ಕಾಯಿಲೆ ಗುಣವಾಗುತ್ತದೆ ಎನ್ನುವ ವಿಶ್ವಾಸ ಇಲ್ಲದವರು ಬಿಜೆಪಿಗೆ ಬರುತ್ತಾರೆ. ಇದನ್ನು ಆಪರೇಷನ್ ಕಮಲ ಎಂದು ಕರೆಯಬಾರದು. ಇಂತಹ ಧ್ರುವೀಕರಣ ರಾಜಕೀಯದಲ್ಲಿ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ ಎಂದು ಹೇಳಿದರು.
ಪಕ್ಷಕ್ಕೆ ಬಂದಿರುವ ಎಲ್ಲರನ್ನೂ ಪಕ್ಷದ ತತ್ವ, ಸಿದ್ದಾಂತದ ಚೌಕಟ್ಟಿನಲ್ಲಿ ಜೀರ್ಣಿಸಿಕೊಳ್ಳುವ ಶಕ್ತಿ ಪಕ್ಷಕ್ಕೆ ಇದ್ದೇ ಇರುತ್ತದೆ. ಏಕೆಂದರೆ ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಯಾವುದೇ ನಾಯಕ ಬಿಜೆಪಿಗೆ ಬಂದರೂ ಆತನ ಚಲನವಲನವನ್ನು ಕಾರ್ಯಕರ್ತರು ಗಮನಿಸುತ್ತಾರೆ. ಆತನಿಂದ ಪಕ್ಷಕ್ಕೆ ಹಾನಿಯಾಗಲು ಬಿಡುವುದಿಲ್ಲ ಎಂದರು.
ಇಡೀ ದೇಶ ಭಯೋತ್ಪಾದನೆಯ ಕರಿನೆರಳಿನಲ್ಲಿ ತತ್ತರಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಭಯೋತ್ಪಾದನೆ ವಿರುದ್ಧ ಜನಜಾಗೃತಿ ಆಂದೋಲನ ರೂಪಿಸಿತು. ಇದು ಇಡೀ ದೇಶಕ್ಕೆ ಮಾದರಿಯಾಯಿತು. ಆದರೆ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸಿದರು. ಅದನ್ನು ಜನ ಗಮನಿಸಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. |