ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲದೆ ಚುನಾವಣೆಯ ಮುನ್ನವೇ ಸೋಲುವ ಸ್ಥಿತಿಯನ್ನು ಕಾಂಗ್ರೆಸ್ ತಾನೇ ಸೃಷ್ಟಿಸಿಕೊಂಡಿದ್ದು, ನಟ, ಸಂಸದ ಅಂಬರೀಶ್ ಯಾವುದೇ ಕಾರಣಕ್ಕೂ ಮಂಡ್ಯದಿಂದ ಸ್ಪರ್ಧಿಸಲಾರೆ ಎಂದು ರಾಗ ಬದಲಿಸುವ ಮೂಲಕ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕುವಂತಾಗಿದೆ.ಮಂಡ್ಯ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರನ್ನೇ ತನ್ನ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿಯೂ ಆಗಿದೆ. ಏತನ್ಮಧ್ಯೆ ಕೇಂದ್ರ ಸಚಿವ ಅಂಬರೀಷ್ ಮೇಲೆ ಹೈಕಮಾಂಡ್ ಒತ್ತಡ ಹೇರುತ್ತಿದ್ದರೂ ಮಂಡ್ಯದ ಗಂಡು ಅಂಬರೀಶ್ ಉಲ್ಟಾ ಹೊಡೆದಿದ್ದಾರೆ.ಮೈಸೂರಿನಿಂದ ಅಂಬರೀಷ್, ಮಂಡ್ಯದಿಂದ ಶಿವರಾಮೇಗೌಡರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಮೊದಲು ನಿರ್ಧರಿಸಿತ್ತು. ಮುನಿಸಿಕೊಂಡ ಅಂಬಿ ಜೆಡಿಎಸ್, ಬಿಜೆಪಿಯೊಂದಿಗೆ ಚೌಕಾಸಿಗೆ ಇಳಿದರು. ಚುನಾವಣೆ ಸಮಯದಲಿ ಪಕ್ಷ ಬಿಟ್ಟರೆ ಆಗುವ ಅನಾಹುತ ಅರಿತ ಕಾಂಗ್ರೆಸ್ ಸ್ಪರ್ಧಿಸುವುದಿದ್ದರೆ ನಿಮಗೇ ಟಿಕೆಟ್ ಎಂದು ಭರವಸೆ ನೀಡಿತ್ತು.ಈ ಸಲ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲು ಅಂಬಿ ಹೇಳಿಕೆ ನೀಡಿ, ತದನಂತರ ಕಣಕ್ಕೆ ಇಳಿದರೆ ಮಂಡ್ಯದಿಂದ ಮಾತ್ರ ಎಂದು ಮತ್ತೊಮ್ಮೆ ಅಂಬರೀಷ್ ಹೇಳುತ್ತ ಬಂದರೇ ವಿನಾ ತೀರ್ಮಾನ ಪ್ರಕಟಿಸಲೇ ಇಲ್ಲ. ಅವರ ನಿರ್ಧಾರಕ್ಕೆ ಕಾದು ಕುಳಿತ ವರಿಷ್ಠರು ಮಂಡ್ಯ ಕ್ಷೇತ್ರ ಹೊರತು ಪಡಿಸಿ ರಾಜ್ಯದ 27 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು.ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕಡಿಮೆಯಾಗಿದೆ ಎನ್ನುವುದು ಅಂಬಿಗೆ ಮನವರಿಕೆಯಾಗಿದೆ. ಶ್ರೀರಂಗಪಟ್ಟಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇ ಇದಕ್ಕೆ ಸಾಕ್ಷಿ. ಜೆಡಿಎಸ್ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿರುವುದು ಅಂಬಿಗೂ ಮನವರಿಕೆಯಾಗಿದೆ. ಇದರಿಂದ ತಮ್ಮ ಗೆಲುವು ಕಷ್ಟ ಎಂದು ಮನವರಿಕೆಯಾದ ಅಂಬಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. |