ಚುನಾವಣೆ ಮುಗಿದ ಬಳಿಕ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕುವುದಾಗಿ ಹೇಳಿರುವ ಗುಲಾಂ ನಬಿ ಆಜಾದ್ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಾರಿಗೆ ಸಚಿವ ಆರ್. ಅಶೋಕ್, ನಾಡಿನ ಜನ ಆಶೀರ್ವಾದ ಮಾಡಿರುವ ಸರ್ಕಾರವನ್ನು ಕಿತ್ತು ಹಾಕಲು, ಇದೇನು ಕಾಂಗ್ರೆಸ್‌ನವರ ಅಪ್ಪನ ಆಸ್ತಿಯೇ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಏನೇ ಆಗಿರಲಿ, ಯಡಿಯೂರಪ್ಪ ಅವರೇ ಪಕ್ಷಾತೀತ ನಾಯಕರು. ಅವರ ನಾಯಕತ್ವದಲ್ಲೇ ಸರ್ಕಾರ ಐದು ವರ್ಷದ ಆಡಳಿತ ಪೂರೈಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಅವರ ಕೈಗೆ ಕೋಳ ಹಾಕಿಸುವುದಾಗಿ ಮಾಡಿಸುವ ಶಪಥ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಹರಿಹಾಯ್ದಿರುವ ಅವರು, ನ್ಯಾಯ ತೀರ್ಮಾನ ಮಾಡಲು ಕೋರ್ಟ್ ಇದೆ ಎನ್ನುವ ಪ್ರಜ್ಞೆ ಇಲ್ಲದೆ ನೀಡಿರುವ ಹೇಳಿಕೆ ನಾಚಿಕೆಗೇಡಿನದು ಎಂದರು.
ಶ್ರೀಕಂಠಯ್ಯ ಅವರ ಬಿಜೆಪಿ ಸೇರ್ಪಡೆಯಿಂದ ಹಾಸನದಲ್ಲಿ ಹನುಮೇಗೌಡರನ್ನು ಬದಲಿಸಲಾಗುತ್ತದೆ ಎಂಬ ವದಂತಿಯಲ್ಲಿ ಸತ್ಯಾಂಶವಿಲ್ಲ ಎಂದ ಅವರು ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರ ಕೊರತೆ ಇದೆ ಎನ್ನುವ ದೂರು ಇನ್ನು ಮುಂದೆ ನಿವಾರಣೆ ಆಗಲಿದೆ ಎಂದು ಹೇಳಿದರು. |