ಕ್ಯಾತಮಾರನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾಚಾರ ಶಾಂತಸ್ಥಿತಿಗೆ ಬಂದಿದ್ದು, ನಿಷೇಧಾಜ್ಞೆಯನ್ನು ಶುಕ್ರವಾರವೂ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಉಂಟಾದ ಗಲಭೆ ತೀವ್ರ ಹಿಂಸಾಚಾರಿಕ್ಕೆ ತಿರುಗಿದ್ದು, ಗುರುವಾರವೂ ಕೂಡ ಹಿಂಸಾಚಾರ ಮುಂದುವರಿದ ಪರಿಣಾಮ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.
ಏಕಾಏಕಿ ಭುಗಿಲೆದ್ದ ಹಿಂಸಾಚಾರದಿಂದಾಗಿ 12ಅಧಿಕ ಮನೆಗಳು 15ವಾಹನಗಳು ಬೆಂಕಿಗೆ ಆಹುತಿಯಾಗಿತ್ತು. ಅಲ್ಲದೇ ಕೆಲವು ದೇವಾಲಗಳ ಮೇಲೂ ದಾಳಿ ನಡೆಸಲಾಗಿತ್ತು. ಪರಿಸ್ಥಿತಿಯನ್ನು ಹತೋಟಿಗಾಗಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದ್ದು ಇದೀಗ ಪರಿಸ್ಥಿತಿ ಶಾಂತವಾಗಿದೆ. ಘಟನೆಗೆ ಸಂಬಂಧಿಸಿದಂತೆ 35ಮಂದಿಯನ್ನು ಬಂಧಿಸಲಾಗಿದೆ.
ಈ ಭಾಗದಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ಜನರು ಭಯಭೀತರಾಗಿ ಪಾತ್ರೆ, ಪದಾರ್ಥಗಳನ್ನು ತುಂಬಿಕೊಂಡು ಊರಿನಿಂದ ಹೊರಗೆ ಹೋಗುತ್ತಿದ್ದಾರೆ. ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರು ಎರಡು ಕೋಮಿನ ನಾಯಕರ ಜತೆ ಶಾಂತಿ ಸಂಧಾನ ಸಭೆ ನಡೆಸಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿದ್ದರು. ನಗರ ಪೊಲೀಸ್ ಆಯುಕ್ತ ಡಾ.ಎಸ್.ಪರಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿಪಿಗಳಾದ ಡಿಸೋಜಾ, ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. |