ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಗಣಿ ಹೋರಾಟ, ಜಾತ್ಯತೀತ ಹೋರಾಟಗಳಿಗಾಗಿ ಜೆಡಿಎಸ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತಮೂರ್ತಿಯವರು ಶುಕ್ರವಾರ ಕಾಂಗ್ರೆಸ್ ಪಕ್ಷದ ವೆಬ್‌ಸೈಟ್‌ಗೆ ಚಾಲನೆ ನೀಡುವ ಮೂಲಕ ನೆಹರು, ಇಂದಿರಾ ಹೆಸರಿನೊಂದಿಗೆ ಬಹುಪರಾಕ್ ಹೇಳಿದರು.ಕಾಂಗ್ರೆಸ್ ಪಕ್ಷವನ್ನು ಸದಾ ಟೀಕಿಸುತ್ತಾ ಬಂದವನು ನಾನು, ಆದರೂ ಕೋಮುವಾದಿಗಳ ಅಟ್ಟಹಾಸ ಮೆರೆದಾಗ, ಗುಜರಾತ್‌ನಲ್ಲಿ ಮಸ್ಲಿಮರ ನರಮೇಧ ನಡೆದಾಗಲೆಲ್ಲಾ ನಾನು ಜಾತ್ಯತೀತ ಪಕ್ಷದ ನಿಲುವನ್ನು ಮೆಚ್ಚಿದವನು, ಆ ನೆಲೆಯಲ್ಲಿ ಅಖಿಲ ಭಾರತ ಪಕ್ಷವೆಂದರೆ ಕಾಂಗ್ರೆಸ್ ಒಂದೇ ಎಂಬುದಾಗಿ ಶ್ಲಾಘಿಸಿದರು.ದೇಶದ ವಿವಿಧೆಡೆ ಕೋಮುಶಕ್ತಿಗಳು ವಿಜೃಂಭಿಸುತ್ತಿವೆ, ಈ ಕೋಮುವಾದಿ ಶಕ್ತಿಯನ್ನು ಬಗ್ಗುಬಡಿಯಲು ಜಾತ್ಯತೀತ ನಿಲುವಿನ ಪಕ್ಷಗಳು ಒಂದಾಗಬೇಕು ಎಂದು ಸಲಹೆ ನೀಡಿದರು.ಕಾಂಗ್ರೆಸ್ ಪಕ್ಷದ ಬೆಂಬಲದಿಂದ ವಿಧಾನಪರಿಷತ್ ಸದಸ್ಯರಾಗಲು ತುದಿಗಾಲಲ್ಲಿ ಅನಂತಮೂರ್ತಿಯವರು ನಿಂತಿದ್ದ ಸಂದರ್ಭದಲ್ಲಿ ಕೆಲವು ಶಾಸಕರು ಕೈ ಕೊಟ್ಟ ಪರಿಣಾಮ ಸದಸ್ಯ ಸ್ಥಾನದಿಂದ ವಂಚಿತರಾದ ಬಳಿಕ ಮೂರ್ತಿಯವರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ತದನಂತರ ಜೆಡಿಎಸ್ ಸಖ್ಯ ಬೆಳೆಸಿದ್ದರು. ಆದರೆ ಯಾವಾಗ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದಾಗ ಅನಂತಮೂರ್ತಿಯವರು ಕಿಡಿಕಾರಿದ್ದರು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಯಾರ್ರೀ ಅದು ಅನಂತಮೂರ್ತಿ?ಎಂದು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ವಿವಾದಕ್ಕೀಡಾಗಿದ್ದರು. ಅಲ್ಲದೇ ಜಾತ್ಯತೀತ ಎಂಬ ಶಬ್ದ ತನಗೆ ತಿಳಿದೆ ಇಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದರು.ಇಂತಹ ಗುದ್ದಾಟದಿಂದ ಜೆಡಿಎಸ್‌ನಿಂದಲೂ ಅನಂತಮೂರ್ತಿ ಮುನಿಸಿಕೊಂಡಿದ್ದರು. ಆದರೂ ತೇಪೆಹಚ್ಚುವ ಕಾರ್ಯ ಎಂಬಂತೆ ಮಾಜಿ ಪ್ರಧಾನಿ ದೇವೇಗೌಡರು ಅನಂತಮೂರ್ತಿಯವರನ್ನು ಕಾರ್ಯಕ್ರಮವೊಂದಕ್ಕೆ ಕರೆತರುವ ಮೂಲಕ ಮತ್ತೆ ಸಖ್ಯ ಬೆಳೆಸಿದ್ದರು. |