ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾರನ್ನು ಕೇಳಿ ಬಳ್ಳಾರಿಗೆ ಹೋಗಿದ್ದು, ಮುಖ್ಯಮಂತ್ರಿ ಆಗಿ ಅವರ ಬಂಧನಕ್ಕೆ ಕೂಡಲೇ ಆದೇಶ ನೀಡಬಹುದಿತ್ತು. ಅವರ ಪಾಪಕ್ಕೆ ಅವರೇ ಹೋಗಲಿ ಎಂದು ಹಾಗೆ ಮಾಡದೆ ಸುಮ್ಮನಾದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಲ್ಲಿನ ಹರಿಹರದ ಗಾಂಧಿ ಮೈದಾನದಲ್ಲಿ ಶುಕ್ರವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇದ್ದಾಗ ಕುಮಾರಸ್ವಾಮಿ ಅಲ್ಲಿಗೆ ಹೋಗಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಪ್ಪ-ಮಕ್ಕಳು ಬಳ್ಳಾರಿಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಉಂಟುಮಾಡಿ ಚುನಾವಣೆಯನ್ನು ಮುಂದೂಡುವ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಮಾಜಿ ಮುಖ್ಯಮಂತ್ರಿಯೊಬ್ಬರು ನಡೆದುಕೊಳ್ಳುವ ರೀತಿಯೇ?ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತ್ ನಿರ್ಮಾಣ ರಾಲಿ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಐವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಭಾರತ ನಿರ್ಮಾಣ ಮಾಡಲು ಪುರುಸೊತ್ತು ಸಿಗಲಿಲ್ವಾ ಎಂದು ವ್ಯಂಗ್ಯವಾಡಿದರು. |