ಹಿಂದುತ್ವದ ವಿರೋಧಿಗಳನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಇನ್ನೊಂದು ಕಾಂಗ್ರೆಸ್ ಪಕ್ಷದಂತಾಗಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.ಬಿಜೆಪಿಯನ್ನು ಇನ್ನು ಮುಂದೆ 'ಕೇಸರಿ ಕಾಂಗ್ರೆಸ್' ಎಂದು ಕರೆಯಬೇಕಾಗಿದೆ. ಬಿಜೆಪಿಯ ಪ್ರಮುಖ ಅಭ್ಯರ್ಥಿಗಳ ವಿರುದ್ದ ಸೇನೆಯ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ಹಿಂದುತ್ವವನ್ನು ಹೀಯಾಳಿಸಿದ ಮುಖಂಡರನ್ನೇ ಬಿಜೆಪಿ ಸೇರಿಸಿಕೊಂಡಿದೆ. ಪ್ರತಿ ಮತಗಟ್ಟೆಯಲ್ಲೂ ಪಕ್ಷದ ಕಾರ್ಯಕರ್ತರಿದ್ದಾರೆಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಾರೆ. 28ಕ್ಷೇತ್ರಗಳಿಗೆ 16ಮಂದಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಅಷ್ಟು ಕಾರ್ಯಕರ್ತರು ನಿಮ್ಮ ಬಳಿ ಇರಲಿಲ್ಲವೇ?ಎಂದು ಅವರು ಸದಾನಂದಗೌಡರನ್ನು ಪ್ರಶ್ನಿಸಿದರು.ಕೇಂದ್ರ ಗೃಹಸಚಿವರೇ ನನ್ನ ಜೀವಕ್ಕೆ ಬೆದರಿಕೆ ಇದೆ ಎಂದು ತಿಳಿಸಿದರೂ ಕೂಡ, ಈ ಸರ್ಕಾರಕ್ಕೆ ನಮ್ಮ ಜತೆ ಮಾತನಾಡುವಷ್ಟು ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದೊಂದು ಕೆಟ್ಟ ಸರ್ಕಾರ ಎಂದು ಟೀಕಿಸಿದರು. |