ರಾಜ್ಯ ಸರ್ಕಾರದ ಬ್ಲಾಕ್‌ಮೇಲ್‌ಗೆ ಹೆದರಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಯೋಗೇಶ್ವರ್ ವಿರುದ್ಧದ ಮೆಗಾಸಿಟಿ ಯೋಜನೆ ಅವ್ಯವಹಾರ ಕುರಿತು ಸಿಒಡಿ ತನಿಖೆಗೆ ಸರ್ಕಾರವೇ ಆದೇಶಿಸಿದೆ. ಆದರೆ, ಬಿಜೆಪಿ ಅಂಥವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ರೆಡ್ಡಿ ಬ್ರದರ್ಸ್ ವಿರುದ್ಧ ಹೋರಾಡುವಷ್ಟು ಹಣಬಲ ಇಲ್ಲ ಎಂಬ ಕಾರಣ ಹೇಳಿ ಜೆಡಿಎಸ್ ಬಳ್ಳಾರಿಯಲ್ಲಿ ಅಭ್ಯರ್ಥಿಯನ್ನು ಹಾಕುತ್ತಿಲ್ಲ. ಬಳ್ಳಾರಿಯಲ್ಲಿ ಸೂಕ್ತ ಅಭ್ಯರ್ಥಿ ಸಿಗದೆ, ಅಲ್ಲಿನ ಗಣಿ-ಧಣಿಗಳ ಪ್ರಭಾವದ ವಿರುದ್ಧ ಹೋರಾಟ ನಡೆಸಲಾಗದೆ ಕೊಂಚ ಹಿಂಜರಿದಿರುವ ಜೆಡಿಎಸ್, ಹಣದ ಕೊರತೆ ಮುಂದಿಟ್ಟುಕೊಂಡು ಬಳ್ಳಾರಿಯಲ್ಲಿ ಹೋರಾಟ ಕೈ ಬಿಟ್ಟಿದೆ ಎಂದು ನುಡಿದರು.
ಅದೊಂದು ಕ್ಷೇತ್ರದಲ್ಲಿ ಮಾತ್ರ ರೆಡ್ಡಿಗಳ ವಿರುದ್ಧ ಹಣ ಚೆಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಳ್ಳಾರಿಯಲ್ಲಿ ಮಾತ್ರ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲಿ ಸುಮಾರು 150 ಕ್ಕೂ ಹೆಚ್ಚು ಪೊಲೀಸರ ರಕ್ಷಣೆಯೊಂದಿಗೆ ನಿತ್ಯವೂ ಅಲ್ಲಿ ಅದಿರು ಲೂಟಿ ನಡೆಯುತ್ತಿದೆ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದರು.
ಪಕ್ಷಾಂತರಿಗಳ ಬಗ್ಗೆ ಮಾತನಾಡಿದ ಅವರು, ಗುರುವಾರ ಬಿಜೆಪಿಗೆ ಸೇರಿದವರು ಪ್ರಬಲ ಒಕ್ಕಲಿಗ ನಾಯಕರಲ್ಲ. ಹಳ್ಳಿಗಳಲ್ಲಿ ಹೇಳುವಂತೆ ಅವರು ಒಂದು ರೀತಿಯ ಮುದಿ ಎತ್ತುಗಳು. ಸಾಮಾನ್ಯವಾಗಿ ಅವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಾರೆ. ಹಾಗಾಗಿದೆ ಬಿಜೆಪಿ ಸ್ಥಿತಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. |