ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿ ಅವರು ಮಂಗಳೂರಿನಿಂದ ಕಾಸರಗೋಡಿನ ಕಣ್ಣೂರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಚುನಾವಣೆಯ ಚಿಹ್ನೆ ಬಳಸಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಅವರ ಕಾರನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.ಯೆಚೂರಿ ಅವರ ಕಾರಿನ ಮುಂಭಾಗದಲ್ಲಿ ಪಕ್ಷದ ಚಿಹ್ನೆ ಬಳಸಿದ್ದು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂಬ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ಅವರ ಕಾರನ್ನು ವಶಪಡಿಸಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಯೆಚೂರಿ ಅವರು ಪೊಲೀಸರೊಂದಿಗೆ ಚರ್ಚೆ ನಡೆಸಿ, ಇದು ಚುನಾವಣೆಯ ಚಿಹ್ನೆಯಲ್ಲ ಎಂಬುದಾಗಿ ಸಮಜಾಯಿಷಿಕೆ ನೀಡಿದರು.ಏತನ್ಮಧ್ಯೆ ಸೀತಾರಾಂ ಯೆಚೂರಿ ಅವರು ಬೇರೊಂದು ಕಾರಿನಲ್ಲಿ ಕಣ್ಣೂರಿಗೆ ತೆರಳಿದರು. ಬಳಿಕ ಚಿಹ್ನೆಯನ್ನು ಪರಿಶೀಲಿಸಿದ ಅಧಿಕಾರಿಗಳು ಅದು ಪಕ್ಷದ ಚಿಹ್ನೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಕಾರನ್ನು ಬಿಡುಗಡೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |