ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಈ ಸಂಬಂಧ ದಾಖಲಾಗಿರುವ ಪ್ರಕರಣದ ತನಿಖೆ ಎದುರಿಸಲು ಸಿದ್ದ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಸೆಗೆ ಕಾರಣವಾದರೂ ಇಲ್ಲವೆ, ಅಂತಹ ಹಿಂಸಾತ್ಮಕ ಹೇಳಿಕೆಗಳನ್ನು ಕೈ ಬಿಡಿ ಎಂದು ನಾನು ಹೇಳಿದ್ದೇನೆಯೇ ಹೊರತು ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವ ಹಿಂದುತ್ವವನ್ನೇ ಪ್ರತಿಪಾದಿಸುವವರ ಕೈ ಕಡಿಯಿರಿ ಎಂದು ಹೇಳಿದರೆ ಅದು ಹಿಂಸೆಗೆ ಕಾರಣವಾಗುವುದಿಲ್ಲವೇ ಎಂದು ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ, ನಾನು ತನಿಖೆ ಎದುರಿಸಲು ಸಿದ್ದವಾಗಿದ್ದೇನೆ ಎಂದರು.
ಶಿವಮೊಗ್ಗದ ಸೊರಬದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರು, ಹಿಂದುತ್ವ ಎನ್ನುವವರ ಕೈ ಕಡಿಯಿರಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿದ್ದರು. |