ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಸಂಸದರಾಗಿ ಆಯ್ಕೆಯಾದರೂ ರಾಜ್ಯದಲ್ಲಿ ಇರುವವರೆಗೂ ಮುಖ್ಯಮಂತ್ರಿಯಾಗುವ ಆಸೆಯನ್ನು ಕೈ ಬಿಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಚುನಾವಣಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ ಸದಸ್ಯರಾದವರು ಮುಖ್ಯಮಂತ್ರಿಯಾದ ನಿದರ್ಶನಗಳು ಬಹಳಷ್ಟಿದ್ದು, ನಾನು ಸಂಸತ್ ಸದಸ್ಯನಾಗಿ ಆಯ್ಕೆಯಾದರೆ ಮುಖ್ಯಮಂತ್ರಿ ಯಾಕಾಗಬಾರದು ಎಂದು ಪ್ರಶ್ನಿಸಿದರು.
ಒಂದು ವೇಳೆ ಮತದಾರರು ಆಶೀರ್ವಾದ ಮಾಡಿ ಈ ಬಾರಿಯ ಗುಲ್ಬರ್ಗ ಲೋಕಸಭೆ ಕ್ಷೇತ್ರದಿಂದ ಆಯ್ಕೆ ಮಾಡಿದರೆ, ರಾಜ್ಯದ ರಾಜಕಾರಣದಿಂದ ದೂರವಾದಂತೆ ಎಂದು ಭಾವಿಸುವುದು ಸರಿಯಲ್ಲ, ಈ ಹಿಂದೆ ವೀರೇಂದ್ರ ಪಾಟೀಲ್ ಮತ್ತು ಎಸ್.ಎಂ.ಕೃಷ್ಣ ಅವರು ಸಂಸದರಾಗಿ ಕೆಲಸ ನಿರ್ವಹಿಸಿ ಮುಖ್ಯಮಂತ್ರಿಗಳಾಗಿದ್ದಾರೆ. ತನಗೆ ಅಂತಹ ಅವಕಾಶ ಸಿಕ್ಕರೆ ನಾನೇಕೆ ಮುಖ್ಯಮಂತ್ರಿ ಆಗಬಾರದು ಎಂದರು.
ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರಗಳನ್ನು ಶಿರಸಾವಹಿಸಿ ಹಿಂದಿನಿಂದಲೂ ಪಾಲಿಸುತ್ತಾ ಬಂದಿದ್ದು, ಈಗಲೂ ಅದನ್ನೇ ಮಾಡಿದ್ದೇನೆ ಹಾಗೂ ಶಿಸ್ತಿನ ಸಿಪಾಯಿಯಂತೆ ಇರುತ್ತೇನೆ ಎಂದರು. |