ಪ್ರಥಮ ಹಂತದ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಶನಿವಾರ ಕಾಂಗ್ರೆಸ್ ಯುವ ನಾಯಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಬೈರೇಗೌಡ, ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಹಲವಾರು ಮಂದಿ ನಾಮಪತ್ರ ಸಲ್ಲಿಸಿದರು.
ಕೃಷ್ಣಬೈರೇಗೌಡ ಅವರು ಪತ್ನಿ ಮೀನಾಕ್ಷಿ, ಕಾಂಗ್ರೆಸ್ ಮುಖಂಡರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರು ಪ್ರಬುದ್ಧರಿದ್ದಾರೆ, ಅಭಿವೃದ್ದಿಗಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಅವರಿಗೆ ತಿಳಿದಿದೆ. ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ತಮಗಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಅಲ್ಲದೇ ಬೀದರ್‌ನಿಂದ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಳ್ಳಿ, ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ, ಬೆಳಗಾವಿಯಲ್ಲಿ ಜೆಡಿಎಸ್ ಹುರಿಯಾಳಾಗಿ ಎ.ಬಿ.ಪಾಟೀಲ್, ಚಿಕ್ಕಬಳ್ಳಾಪುರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಮುಂಗಾರು ಮಳೆ ಖ್ಯಾತಿಯ ಇ.ಕೃಷ್ಣಪ್ಪ ತಮ್ಮ ಅಭಿಮಾನಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಮತ್ತೊಂದು ಪ್ರತಿಷ್ಠಿತ ಕಣ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್, ಏರ್ ಡೆಕ್ಕನ್ ಸಂಸ್ಥೆಯ ಕ್ಯಾ.ಗೋಪಿನಾಥ್, ಜೆಡಿಎಸ್ ಅಭ್ಯರ್ಥಿ ಪ್ರೊ.ಇ.ರಾಧಾಕೃಷ್ಣ ಸೇರಿದಂತೆ ಹಲವು ಪಕ್ಷೇತರರು ಅಖಾಡದಲ್ಲಿದ್ದಾರೆ. |