'ನಿಮಗೆ ತಾಕತ್ತಿದ್ದರೆ ತಕ್ಷಣವೇ ನನ್ನನ್ನು ಬಂಧಿಸಿ, ನೋಡುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.
ನಗರದ ದಸರಾ ವಸ್ತು ಪ್ರದರ್ಶನದಲ್ಲಿ ಏರ್ಪಡಿಸಿದ್ದ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿ ಯಾರಪ್ಪನ ಆಸ್ತಿ ಎಂದು ಇವರಿಗೆ ಅರ್ಜಿ ಹಾಕಿಕೊಂಡು ನಾನು ಅಲ್ಲಿಗೆ ಹೋಗಬೇಕಿತ್ತು. ಮನಸ್ಸು ಮಾಡಿದರೆ ನನ್ನನ್ನು ಜೈಲಿಗೆ ಹಾಕಿಸಿಬಿಡುತ್ತೇನೆ ಎನ್ನುವ ಇವರು ದೇವೇಗೌಡರ ಮಗನನ್ನು ಜೈಲಿಗೆ ಹಾಕಿಸಲಿ, ನೋಡುತ್ತೇನೆ ಎಂದು ಆಕ್ರೋಶಿತರಾಗಿ ಹೇಳಿದರು.
'ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾರನ್ನು ಕೇಳಿ ಬಳ್ಳಾರಿಗೆ ಹೋಗಿದ್ದು, ಮುಖ್ಯಮಂತ್ರಿ ಆಗಿ ಅವರ ಬಂಧನಕ್ಕೆ ಕೂಡಲೇ ಆದೇಶ ನೀಡಬಹುದಿತ್ತು. ಅವರ ಪಾಪಕ್ಕೆ ಅವರೇ ಹೋಗಲಿ ಎಂದು ಹಾಗೆ ಮಾಡದೆ ಸುಮ್ಮನಾದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹರಿಹರದಲ್ಲಿ ಮಾತನಾಡುತ್ತ ಹರಿಹಾಯ್ದಿದ್ದರು.
ಗಣಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇದ್ದಾಗ ಕುಮಾರಸ್ವಾಮಿ ಅಲ್ಲಿಗೆ ಹೋಗಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಅಲ್ಲದೇ ಅಪ್ಪ-ಮಕ್ಕಳು ಬಳ್ಳಾರಿಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಉಂಟುಮಾಡಿ ಚುನಾವಣೆಯನ್ನು ಮುಂದೂಡುವ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿ, ಇದು ಮಾಜಿ ಮುಖ್ಯಮಂತ್ರಿಯೊಬ್ಬರು ನಡೆದುಕೊಳ್ಳುವ ರೀತಿಯೇ?ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. |