ಡಾ.ರಾಜ್‌ಕುಮಾರ್ ಅವರನ್ನು ನರಹಂತಕನ ವೀರಪ್ಪನ್ ಕೈಯಿಂದ ಬಿಡಿಸಿಕೊಂಡು ಬರಲು ಹಣ ಕೊಟ್ಟಿದ್ದು ನಿಜ. ಆದರೆ ಎಷ್ಟೆಂದು ಕೇಳಬೇಡಿ. ಅದು ಮುಗಿದು ಹೋದ ಅಧ್ಯಾಯ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದರು.
ಸಿನಿ ಪತ್ರಕರ್ತರು ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು , ದುಡ್ಡು ಕೊಟ್ಟು ಬಿಡಿಸಿದ್ದಕ್ಕೆ ಅಪ್ಪಾಜಿಗೂ ಬೇಸರವಿತ್ತು ಎಂದ ಅವರು, ದುಡ್ಡು ಕೊಟ್ಟಿದ್ದು ಸರ್ಕಾರವೋ ಅಥವಾ ತಮ್ಮ ಕುಟುಂಬವೋ ಎಂಬ ಬಗ್ಗೆ ಏನನ್ನು ವಿವರಣೆ ನೀಡಲಿಲ್ಲ.
ಅಪ್ಪಾಜಿ ಕಾಡಿನಿಂದ ಬರುವಾಗ ಕೆಲವರು ಆಡಿದ ಚುಚ್ಚು ಮಾತು ಕೇಳಿ ಮಾನಸಿಕವಾಗಿ ನೊಂದಿದ್ದರು. ಅದೆಲ್ಲಾ ಈಗ ಮುಗಿದ ಅಧ್ಯಾಯ. ಇದನ್ನು ಕೆದಕುತ್ತಾ ಹೋದರೆ ಏನೇನೋ ಆಗುತ್ತದೆ. ಈಗ ಅಪ್ಪಾಜಿಯೂ ಇಲ್ಲ. ವೀರಪ್ಪನ್ ಸಹ ಇಲ್ಲ ಎಂದು ಹೇಳಿದರು.
ರಾಜ್ ಅಪಹರಣ ಸಂದರ್ಭದಲ್ಲಿ ಕನ್ನಡ ಜನತೆಯ ಸಹಕಾರವನ್ನು ನೆನೆದ ಅವರು, ಅಪ್ಪಾಜಿ ಅಪಹರಣವಾದಾಗ ನಮ್ಮ ಮನೆ ಸರ್ವಧರ್ಮ ಸಮನ್ವಯ ಕೇಂದ್ರವಾಗಿತ್ತು. ಒಂದೇ ಕಾಲಕ್ಕೆ ಅದು ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಾಗಿತ್ತು. ಎಲ್ಲರು ಬಂದು ಅಪ್ಪಾಜಿಯ ಬಿಡುಗಡೆಗಾಗಿ ಪ್ರಾರ್ಥಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿವಣ್ಣ, ಯಾವುದೇ ಕಾರಣಕ್ಕೂ ರಾಜಕೀಯ ಸೇರುವುದಿಲ್ಲ. ನನಗೆ ರಾಜಕೀಯ ಒಗ್ಗುವುದೂ ಇಲ್ಲ. ವೈಯಕ್ತಿಕ ಜೀವನದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ ಎಂದರು. ಮಾವ ಬಂಗಾರಪ್ಪನವರ ಪರ ಪ್ರಚಾರಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಅವರು ನನ್ನನ್ನೆಂದೂ ಪ್ರಚಾರಕ್ಕೆ ಕರೆದಿಲ್ಲ. ನಾನು ಮಾಡೋದೂ ಇಲ್ಲ. ನಾವಿಬ್ಬರು ಮಾವ-ಅಳಿಯ ಎನ್ನುವುದಕ್ಕಿಂತ ಸ್ನೇಹಿತರ ಹಾಗಿದ್ದೀವಿ ಎಂದು ಉತ್ತರಿಸಿದರು.
|