ಹಿಂದುತ್ವ ಎನ್ನುವವರ ಕೈ ಕಡಿಯಬೇಕೆಂಬ ಹೇಳಿಕೆ ನೀಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ವರದಿ ನೀಡುವಂತೆ ಸುರತ್ಕಲ್ ಠಾಣಾ ಪೊಲೀಸರಿಗೆ ಇಲ್ಲಿನ ಒಂದನೇ ಸಿಜೆಎಂ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
ಸೊರಬದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದುತ್ವ ಎನ್ನುವವರ ಕೈ ಕತ್ತರಿಸಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಾಗೋಡು ತಿಮ್ಮಪ್ಪ ವಿರುದ್ಧ ವಿಧಾನಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ಅವರ ಪರವಾಗಿ ವಕೀಲ ಪಿ.ಪಿ.ಹೆಗ್ಡೆ ಮಂಗಳೂರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.
ಅರ್ಜಿ ಸ್ವೀಕರಿಸಿದ್ದ ನ್ಯಾಯಾಲಯ ಶನಿವಾರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕಾಗೋಡು ಹೇಳಿಕೆ ಪ್ರತ್ಯಕ್ಷವಾಗಿ ಕೇಳಿಸಿಕೊಂಡಿರುವುದಾಗಿ ಹಿಂದು ಸಂಘಟನೆಯ ಮನೋಜ್ ಪೂಜಾರಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದರು. ಅಲ್ಲದೇ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಡಿಯನ್ನು ವೀಕ್ಷಿಸಿದ ನ್ಯಾಯಾಧೀಶರು ಕಾಗೋಡು ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ಪರಿಗಣಿಸಿ ತನಿಖೆ ನಡೆಸಲು ಪೊಲೀಸರಿಗೆ ಆದೇಶ ನೀಡಿದರು. |