ಹಿಂಸಾಚಾರದಿಂದ ಕಂಗೆಟ್ಟಿದ್ದ ಮೈಸೂರಿನ ಕ್ಯಾತಮಾರನಹಳ್ಳಿಗೆ ಭೇಟಿ ನೀಡಲು ಪ್ರಯತ್ನಿಸಿದ ಆರೋಪದ ಮೇಲೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಸೋಮವಾರ ಬಂಧಿಸಲಾಯಿತು.ಕ್ಯಾತಮಾರನಹಳ್ಳಿಯಲ್ಲಿ ಎರಡು ಕೋಮುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡ ಜಗಳ, ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ವಾಹನ, ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡು-ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಕೂಡ ಹೇರಲಾಗಿತ್ತು.ಬೂದಿ ಮುಚ್ಚಿದ ಕೆಂಡದಂತಿದ್ದ ಕ್ಯಾತಮಾರನಹಳ್ಳಿಗೆ ಪ್ರಮೋದ್ ಮುತಾಲಿಕ್ ಅವರು ಇಂದು ಬೆಳಿಗ್ಗೆ ಭೇಟಿ ನೀಡಲು ಆಗಮಿಸಿದ ಸಂದರ್ಭದಲ್ಲಿ ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿಯೇ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕ್ಯಾತಮಾರನಹಳ್ಳಿಯಲ್ಲಿ ಇದೀಗ ಪರಿಸ್ಥಿತಿ ಸಂಪೂರ್ಣ ತಿಳಿಯಾದ ಮೇಲೆ, ಮುತಾಲಿಕ್ ಗಲಭೆಯಲ್ಲಿ ಹಾನಿಗೊಳಗಾದ ದೇವಾಲಯ ಮತ್ತು ಮನೆಗಳಿಗೆ ಭೇಟಿ ನೀಡಲು ತೆರಳುತ್ತಿದ್ದ ಸಂದರ್ಭದಲ್ಲಿ, ಅಲ್ಲಿಗೆ ತೆರಳಲು ಸಾಧ್ಯವಿಲ್ಲ ಎಂದು ಪೊಲೀಸರು ಮನವರಿಕೆ ಮಾಡಿದ ಬಳಿಕ ಅವರನ್ನು ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ಅವರಿಂದ ಹೇಳಿಕೆ ಪಡೆಯಲಾಗಿದ್ದು, ಮಧ್ನಾಹ್ನದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |