ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದರು ಎಂಬ ಸಿಟ್ಟಿನ ಭರದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ನೀಡಿರುವ ಪ್ರತಿಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಯಾವುದೇ ರಾಜಕಾರಣಿಗಳು ಸಂಯಮ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಹಿಂದುತ್ವ ಎನ್ನುವವರ ಕೈ ಕತ್ತರಿಸಬೇಕು ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಹರಿಹಾಯ್ದಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಭಾನುವಾರ, ಹಿಂದುತ್ವದ ವಿರುದ್ದ ಮಾತನಾಡುವವರ ತಲೆ ಕತ್ತರಿಸಬೇಕು ಎಂದು ಹೇಳಿದ್ದರು.
ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, ಸಂಯಮ ಕಳೆದುಕೊಂಡು ಯಾವುದೇ ರಾಜಕಾರಣಿಗಳು ಪ್ರಚೋದನಾಕಾರಿ ಹೇಳಿಕೆ ನೀಡಬಾರದು ಎಂದ ಅವರು, ಇದು ರೇಣುಕಾಚಾರ್ಯಗೂ ಅನ್ವಯ, ಕಾಗೋಡು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತೆ ಎಂದರು.
ಅವರ ಮೇಲೆ ಕ್ರಮ ಕೈಗೊಳ್ಳಬೇಕೆ ಅಥವಾ ಬೇಡವೇ?ಎಂಬುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದರು. ಅಲ್ಲದೇ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆಗೆ ಚುನಾವಣಾ ಆಯೋಗ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಈ ಸಂದರ್ಭದಲ್ಲಿ ತಿಳಿಸಿದರು. |