ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಅದರಲ್ಲೂ ವಿಶಿಷ್ಟ ಚಳವಳಿಗಳ ಮೂಲಕ ಸದಾ ಪ್ರಚಾರದಲ್ಲಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ದೇವಾಲಯಕ್ಕೆ ತೆರಳದೆ ಕತ್ತೆ, ಒಂಟೆ ಜೋಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಅಲ್ಲಿಯೂ ವಿಶಿಷ್ಟ್ಯತೆ ಮೆರೆದಿದ್ದಾರೆ.ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ವಾಟಾಳ್ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಕೆ.ಪ್ರಭಾಕರ ರೆಡ್ಡಿ ಅವರು ತಮ್ಮ ನಾಮಪತ್ರ ಸಲ್ಲಿಕೆಯ ಮುನ್ನ, ಸಿಂಗರಿಸಿ ನಿಂತ ಜೋಡಿ ಒಂಟೆ, ಕತ್ತೆ, ದನ, ಕುದುರೆಗಳಿಗೆ ಪೂಜೆ ಸಲ್ಲಿಸಿ, ಕತ್ತೆ, ಒಂಟೆಗಳಿಗೆ ಹೂಮಾಲೆ ಹಾಕಿ, ಆರತಿ ಎತ್ತಿ, ನಮಸ್ಕರಿಸಿ ಆಶೀರ್ವಾದ ಪಡೆದರು!ಏಪ್ರಿಲ್ 9ರಿಂದ ಪ್ರಚಾರ ಕಾರ್ಯ ಆರಂಭಿಸುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಧ್ಯವಾದರೆ ಆ ಸಂದರ್ಭದಲ್ಲೇ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಹೇಳಿದರು.ಪ್ರಾಣಿಗಳಿಗೆ ಪೂಜೆ ಸಲ್ಲಿಸಿದ ಕುರಿತು ವಿವರಣೆ ನೀಡಿದ ವಾಟಾಳ್, ಪ್ರಾಣಿಗಳಲ್ಲಿ ಮಾತ್ರ ಉತ್ತಮವಾದ ಪ್ರಾಮಾಣಿಕತೆ ಹೊಂದಿವೆ. ಅವುಗಳಿಗೆ ಯಾವುದೇ ಜಾತಿ, ಧರ್ಮದ ತಾರತಮ್ಯ ತಿಳಿದಿಲ್ಲ ಎಂದರು. ಆ ಕಾರಣಕ್ಕಾಗಿ ಶುದ್ಧ ಚಾರಿತ್ರ್ಯ ಹೊಂದಿರುವ ಪ್ರಾಣಿಗಳ ಆಶೀರ್ವಾದ ಪಡೆಯುತ್ತಿರುವುದಾಗಿ ತಿಳಿಸಿದರು.ಕಾವೇರಿ ನೀರು ವಿವಾದ, ಮಹಾರಾಷ್ಟ್ರ ಗಡಿವಿವಾದ ಹಾಗೂ ಕನ್ನಡದಲ್ಲಿ ಆಡಳಿತ ಸೇರಿದಂತೆ ಹಲವಾರು ಸಮಸ್ಯೆಗಳ ವಿರುದ್ಧ ಚಳವಳಿ ನಡೆಸುವ ಸಂದರ್ಭದಲ್ಲಿ ವಾಟಾಳ್ ಈ ಪ್ರಾಣಿಗಳನ್ನು ಉಪಯೋಗಿಸಿಕೊಂಡಿದ್ದರು. ಹಲವಾರು ಚಳವಳಿಗಳಲ್ಲಿ ಈ ಪ್ರಾಣಿಗಳು ನನಗೆ ಸಾಥ್ ನೀಡಿವೆ. ಆ ನೆಲೆಯಲ್ಲಿ ನಾನು ಅವುಗಳಿಗೆ ಪೂಜೆ ಸಲ್ಲಿಸುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ಹೇಳಿದರು. |