ಇತ್ತೀಚೆಗಷ್ಟೇ ಬಿಜೆಪಿ ಪಾಳಯ ಸೇರಿದ್ದ ಗೋವಿಂದರಾಜ ನಗರದ ಶಾಸಕ ವಿ.ಸೋಮಣ್ಣ ಬುಧವಾರ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಇಂದು ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತಕುಮಾರ್, ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ಅಶೋಕ್ ಸೋಮಣ್ಣ ಅವರಿಗೆ ಹಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದು, ಆ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು. ಯಡಿಯೂರಪ್ಪ ಸಾಹೇಬರ, ಅನಂತಕುಮಾರ್ ಸಾಹೇಬರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೆಚ್ಚಿ ಕಮಲ ಪಕ್ಷಕ್ಕೆ ಸೇರಿದ್ದೇನೆ.
ಇದು ತನ್ನ ಕೊನೆಯ ಬ್ಯಾಟಿಂಗ್ ಎಂದು ಸ್ಪಷ್ಟಪಡಿಸಿರುವ ಅವರು, ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸರಗೊಂಡಿರುವುದಾಗಿ ತಿಳಿಸಿರುವ ಸೋಮಣ್ಣ, ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಕಾಂಗ್ರೆಸ್ ತೊರೆಯುತ್ತಿರುವುದಾಗಿ ಏಪ್ರಿಲ್ 3ರಂದು ಅಧಿಕೃತವಾಗಿ ಘೋಷಿಸಿದ್ದರು. |