ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆ ಭವಿಷ್ಯ ಹೇಳ್ತಾರೆ, ಅವರನ್ನು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕವಡೆ ಕೊಟ್ಟು ಕೂರಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಲೇವಡಿ ಮಾಡಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಂಗಾರಪ್ಪ ಬುಧವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ, ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ನೀಡಿದ ಉತ್ತರ ಇದು.ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಗ ರಾಘವೇಂದ್ರ ನನಗೆ ಸಮರ್ಥ ಎದುರಾಳಿ ಅಲ್ಲ ಎಂದ ಅವರು, ಯಡಿಯೂರಪ್ಪ ಕೂಡ ನನಗೆ ಸಮನಾದ ವ್ಯಕ್ತ ಅಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದರು. ಅಲ್ಲದೇ ಬಹಿರಂಗ ಚರ್ಚೆಗೆ ಮುಖ್ಯಮಂತ್ರಿಗಳು ಆಹ್ವಾನಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಂಗಾರಪ್ಪ, ಅವರು ಬಹಿರಂಗ ಚರ್ಚೆಗೆ ಕರೆದ ಕೂಡಲೇ ನಾನು ಹೋಗ್ತೇನಾ?. ಮುನ್ಸಿಪಾಲ್ಟಿಯಲ್ಲಿ ಇದ್ದವರು ಅಂತಾರಾಷ್ಟ್ರೀಯ ವಿಷಯದ ಬಗ್ಗೆ ಕೇಳಿದ್ರೆ ಏನ್ ಉತ್ತರ ಕೊಡ್ತಾರೆ. ಚರ್ಚೆ ಎಂದ ಮೇಲೆ, ರಾಷ್ಟ್ರ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿಷಯ ಬರುತ್ತದೆ. ಆ ಕಾರಣಕ್ಕಾಗಿ ನನಗೆ ಯಡಿಯೂರಪ್ಪ ಸಮನಾದ ವ್ಯಕ್ತಿಯಲ್ಲ, ಚರ್ಚೆಗೆ ಆಡ್ವಾಣಿಯಾಗಲಿ, ಪಕ್ಷದ ಹಿರಿಯ ಮುಖಂಡರಾಗಲಿ ಬರಲಿ ಅವರೊಂದಿಗೆ ಮಾತಾಡುತ್ತೇನೆ ಎಂದು ತಿರುಗೇಟು ನೀಡಿದರು. |