ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬಂದರೆ ನಾನು ಈಗಲೂ ಸಿದ್ದ, ಅದಕ್ಕೆ ತಗಲುವ ವೆಚ್ಚವನ್ನು ಭರಿಸಲು ತಾನು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಒಡ್ಡಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಯಡಿಯೂರಪ್ಪ ಅವರು ತಮ್ಮ ಪಕ್ಷದ ರಾಷ್ಟ್ರೀಯ ಮುಖಂಡ ಆಡ್ವಾಣಿ ಅವರಂತೆ ಫೋಜು ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ ದಿನದಿಂದಲೂ ಪ್ರತಿಪಕ್ಷಗಳು ಅಭಿವೃದ್ಧಿ ಬಗ್ಗೆ ಸಾರ್ವಜನಿಕ ಚರ್ಚೆಗೆ ಬಂದರೆ ಬಣ್ಣ ಬಯಲು ಮಾಡುತ್ತೇನೆ ಎಂದು ಅವರು ಅಬ್ಬರಿಸಿಕೊಂಡೇ ಬಂದಿದ್ದಾರೆ. ಆದರೆ ಈವರೆಗೂ ಅಂತಹ ವೇದಿಕೆ ಸೃಷ್ಟಿ ಮಾಡಿಲ್ಲ ಎಂದು ಹೇಳಿದರು. ಪ್ರತಿಪಕ್ಷಗಳ ಪ್ರಶ್ನೆಗೆ ಹೆದರಿ ಅಧಿವೇಶನದ ದಿನಗಳನ್ನೇ ಮೊಟಕುಗೊಳಿಸಲಾಯಿತು. ಯಾವುದೇ ಸಂದರ್ಭದಲ್ಲೂ ಅಭಿವೃದ್ಧಿ ಕುರಿತ ಸಾರ್ವಜನಿಕ ಸವಾಲು, ಪ್ರತಿಸವಾಲುಗಳಿಗೆ ಉತ್ತರಿಸಲು ತಾವು ಸಿದ್ದವಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.
|