ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬುಧವಾರ ನಾಮಪತ್ರ ಸಲ್ಲಿಸಿದ್ದು, ಅವರು ಸಲ್ಲಿಸಿದ ಆದಾಯ ಪ್ರಮಾಣ ಪತ್ರದಲ್ಲಿ, ಗೌಡರಿಗೆ ಆಸ್ತಿ, ಆದಾಯಕ್ಕಿಂತ ಸಾಲವೇ ಹೆಚ್ಚಾಗಿದ್ದು, ಗೌಡರ ಪತ್ನಿ ಚನ್ನಮ್ಮ ಮಾತ್ರ ಕೋಟ್ಯಧೀಶರು.
ಹಾಸನ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆಗೆ ಬುಧವಾರ ಪತ್ನಿ ಚನ್ನಮ್ಮ, ಪುತ್ರ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಜತೆಗೂಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಳಿ 3,25,587.62ರೂಪಾಯಿ ಚರ ಮತ್ತು ಸ್ತಿರಾಸ್ತಿ ಇದೆ. ವಿವಿಧ ಮೂಲಗಳಿಂದ ಮಾಡಿದ ಅವರ ಸಾಲದ ಮೊತ್ತ 64, 99,000 ರೂಪಾಯಿ. ಹುಟ್ಟೂರು ಹರದನಹಳ್ಳಿಯಲ್ಲಿ ಪಿತ್ರಾರ್ಜಿತ ಮನೆ, ಸಂಚಾರಕ್ಕಾಗಿ ಎರಡು ಅಂಬಾಸಿಡರ್ ಕಾರು ಇದೆ. ಅರ್ಧ ಲಕ್ಷ ಚಿನ್ನಾಭರಣ ಹೊಂದಿದ್ದಾರೆ. ಗಳಿಕೆಯ ಆಸ್ತಿಯಲ್ಲಿ ಪತ್ನಿ ಚನ್ನಮ್ಮ ಅವರಿಂದಲೇ ಇನ್ನೂ 11ಲಕ್ಷ ರೂ. ಬಾಕಿ ಬರಬೇಕಿದೆ.
ದೇವೇಗೌಡರಿಗಿಂತ ಅವರ ಪತ್ನಿಯ ಆಸ್ತಿ ಮೊತ್ತ ಭಾರಿ ದೊಡ್ಡದು, ಬೆಂಗಳೂರಿನ ಪದ್ಮನಾಭನಗರದಲ್ಲಿ 80 ಲಕ್ಷ ರೂಪಾಯಿ ಮೌಲ್ಯದ ಮನೆ, ಕೃಷಿ ಜಮೀನು, ಟ್ರ್ಯಾಕ್ಟರ್, ಪಡುವಲ ಹಿಪ್ಪೆಯಲ್ಲೊಂದು ಮನೆ, ಹರದನಹಳ್ಳಿಯಲ್ಲಿ ಜಮೀನು, ವಾಣಿಜ್ಯ ಸಂಕೀರ್ಣ, ಚನ್ನಾಂಬಿಕಾ ಎಂಟರ್ಪ್ರೈಸಸ್ ಸೇರಿ 1,65,70503 ರೂಪಾಯಿ ಆಸ್ತಿವಂತರು. ದೇವೇಗೌಡರಿಗೆ 11ಲಕ್ಷ ರೂಪಾಯಿ ಕೊಡುವುದನ್ನು ಬಿಟ್ಟರೆ ಬೇರೇನೂ ಸಾಲದ ಬಾಕಿ ಇಲ್ಲ. |