ಚುನಾವಣೆ ನಂತರ ಯಾವುದೇ ಪಕ್ಷೇತರ ಸಚಿವರ ಸ್ಥಾನಕ್ಕೂ ಧಕ್ಕೆಯಾಗದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ವಿಶ್ವಾಸ ವ್ಯಕ್ತಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ಸಮಂಜಸ. ಏಕೆಂದರೆ ಸಮರ್ಥರು ಮುಖ್ಯಮಂತ್ರಿ ನೀರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತಾರೆ. ಸಾಮರ್ಥ್ಯ ಇಲ್ಲದವರೂ ಅಂಥ ಕುರ್ಚಿಯಲ್ಲೂ ಕೂರಬಾರದು. ಸಂಪುಟದ ನಾಯಕರಾಗಿ ಮುಖ್ಯಮಂತ್ರಿ ಎಲ್ಲ ಕಾರ್ಯಗಳನ್ನು ಗಮನಿಸುತ್ತಾರೆ. ಅದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಇದರಿಂದ ಪಕ್ಷೇತರರಿಗೆ ಯಾವುದೇ ಆತಂಕವಿಲ್ಲ ಎಂದು ಅವರು ಭರವಸೆಯ ಮಾತುಗಳನ್ನಾಡಿದರು.
ಪಕ್ಷೇತರರು ಅಪತ್ಕಾಲದಲ್ಲಿ ನೆರವಾದವರೆಂಬ ಭಾವನೆ ಯಡಿಯೂರಪ್ಪ ಅವರಿಗಿದೆ. ನಮ್ಮ ಪಕ್ಷೇತರ ಸಚಿವರಷ್ಟೇ ಅಲ್ಲ. ಸಂಪುಟದ ಎಲ್ಲಾ ಸಚಿವರೂ ಒಂದಾಗಿಯೇ ಇದ್ದೇವೆ. ನಮ್ಮದೇ ಆದ ಪಕ್ಷೇತರರ ಒಕ್ಕೂಟ ರಚನೆ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಕಾಂಗ್ರೆಸ್ ಕಿರುಕುಳ ತಾಳದೆ ಬಂಡಾಯವೆದ್ದು ಸ್ವತಂತ್ರವಾಗಿ ಗೆದ್ದುಬಂದ ನನಗೆ ಸಚಿವ ಸ್ಥಾನ ಹೋಗಲಿದೆ ಎಂಬ ಆತಂಕ ಇಲ್ಲವೇ ಇಲ್ಲ" ಎಂದು ನರೇಂದ್ರ ಸ್ವಾಮಿ ಹೇಳಿದರು. ನಾನು ಈಗ ಬಿಜೆಪಿ ಸಹ ಸದಸ್ಯ. ಆ ಪಕ್ಷದ ತತ್ವ, ಸಿದ್ದಾಂತ ಹಾಗೂ ಆಚಾರ-ವಿಚಾರಗಳನ್ನು ಒಪ್ಪಿಕೊಂಡಿದ್ದೇನೆ. ಮುಂದೆ ಬಿಜೆಪಿಯಿಂದ ಸ್ಪರ್ಧಿಸಬೇಕೆ ಎಂಬುದನ್ನು ಆ ಸಮಯದಲ್ಲಿ ನಿರ್ಧರಿಸುತ್ತೇನೆ ಎಂದರು.
|