ನಕಲಿ ಛಾಪಾ ಕಾಗದ ಹಗರಣ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿರುವ ಅಪರಾಧಿಗಳಿಗೆ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಕಟಿಸಿದ್ದು, ಮಾಜಿ ಎಸಿಪಿ ಸಂಗ್ರಾಮ್ ಸಿಂಗ್ ಅವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರುಪಾಯಿ ದಂಡ ವಿಧಿಸಿದೆ. ಅಲ್ಲದೇ ಕರೀಂ ಲಾಲ್ ತೆಲಗಿ ಹಾಗೂ ಆತನ 7 ಮಂದಿ ಸಹಚರರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡವನ್ನು ವಿಧಿಸಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂಗ್ರಾಮ್ ಸಿಂಗ್ ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ ಆರು ತಿಂಗಳು ಜೈಲು ವಾಸ ಹಾಗೂ ತೆಲಗಿ ಸೇರಿದಂತೆ ಇತರ ಎಂಟು ಮಂದಿ ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಮಂಗಳವಾರ ಮಾಜಿ ಎಸಿಪಿ ಸಂಗ್ರಾಮ್ ಸಿಂಗ್. ಕರೀಂ ಲಾಲ್ ತೆಲಗಿ ಹಾಗೂ ಆತನ 7 ಮಂದಿ ಸಹಚರರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದ್ದು, ಶಿಕ್ಷೆ ಪ್ರಮಾಣದ ಘೋಷಣೆಯನ್ನು ಶುಕ್ರವಾರಕ್ಕೆ ಕಾಯ್ದಿರಿಸಲಾಗಿತ್ತು. ಇದೇ ವೇಳೆ ಪ್ರಕರದ ಆರೋಪಿಯಾಗಿದ್ದ ಮಾಜಿ ಸಚಿವ ರೋಶನ್ ಬೇಗ್ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಮಾನಿಸಿತ್ತು.
ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ ಈಗಾಗಲೇ ಮೊಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗಾಗಿ, ಒಂದೇ ಪ್ರಕರಣ ಸಂಬಂಧಿಸಿದಂತೆ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸುವ ಬದಲು ಮೊದಲ ತೀರ್ಪಿನ ಜೊತೆಗೆ ಸೇರಿಸಬೇಕು ಎಂದು ತೆಲಗಿ ಪರ ವಕೀಲರಾಗಿರುವ ಎಂ.ಟಿ. ನಾಣಯ್ಯ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. |